ಕಾಬೂಲ್,ಫೆ.27- ಪಾಕಿಸ್ತಾನದ ಕೆಲವು ಸೇನಾನೆಲೆಗಳನ್ನು ವಶಪಡಿಸಿ ಕೊಂಡಿರುವುದಾಗಿ ಆಫ್ಘಾನಿಸ್ತಾನ ಮಿಲಿಟರಿ ತಿಳಿಸಿದೆ. ಇತ್ತೀಚೆಗೆ ಆಫ್ಘಾನಿಸ್ತಾನದ ಮೇಲೆ ಪಾಕ್ ನಡೆಸಿದ ದಾಳಿಗೆ ಇದು ಪ್ರತೀಕಾರದ ದಾಳಿಯಾಗಿದೆ ಎಂದು ಅದು ಹೇಳಿದೆ. ತನ್ಮೂಲಕ ಎರಡು ನೆರೆ ರಾಷ್ಟ್ರಗಳಲ್ಲಿ ಸಂಘರ್ಷ, ಹಿಂಸೆ ಭುಗಿಲೆದ್ದಿದೆ. ಭಾನುವಾರ ತಾನು ನಡೆಸಿದ ವಾಯುದಾಳಿ
ಆ ಪ್ರದೇಶದಲ್ಲಿ ಆಫ್ಘಾನಿಸ್ತಾನ ಇಳಿಸಿದ್ದ ಬಂಡುಕೋರರ ಮೇಲಿನ ದಾಳಿಯಾಗಿತ್ತು ಎಂದು ಪಾಕ್ ಸರ್ಕಾರ ತಿಳಿಸಿದೆ.
ಉಭಯ ರಾಷ್ಟ್ರಗಳ ಗಡಿಯುದ್ದಕ್ಕೂ ಸಂಘರ್ಷ ನಡೆಯುತ್ತಿರುವುದನ್ನು ಅದು ಖಚಿತಪಡಿಸಿದೆ. ಆದೆ ತನ್ನ ಸೇನಾ ನೆಲಗಳನ್ನು ವಶಪಡಿಸಿಕೊಂಡಿರುವುದಾಗಿ ಆಫ್ಘಾನ್ ಸೇನೆ ಮಾಡಿರುವ ಪ್ರತಿಪಾದನೆಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆಫ್ಘಾನಿಸ್ತಾನದ ದಾಳಿ ಅಪ್ರಚೋದಿತ ಎಂದು ಅದು ಹೇಳಿದೆ.
ಪೂರ್ವ ಆಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಪಡೆಗಳಿಂದ ಇತ್ತೀಚೆಗೆ ನಡೆದ ದಾಳಿಗೆ ಪ್ರತಿಕಾರ ದಾಳಿ ನಡೆಸಿರುವುದಾಗಿ ಆಫ್ಘಾನ್ ಸೇನೆ ವಿವರಿಸಿದೆ. ಎರಡೂ ದೇಶಗಳ 2,611 ಕಿ.ಮೀ.ಗಳಷ್ಟು ಉದ್ದದ ಗಡಿಯನ್ನು ಡ್ಯುರಾಂಡ್‌ರೇಖೆ ಎಂದು ಗುರುತಿಸಲಾಗುತ್ತದೆ. ಆಫ್ಘಾನಿಸ್ತಾನ ಇದನ್ನು ಇನ್ನೂ ಅಧಿಕೃತವಾಗಿ ಮಾನ್ಯ ಮಾಡಿಲ್ಲ.
ತಾನು ನಡೆಸಿದ ದಾಳಿಯಲ್ಲಿ 17 ಪಾಕಿಸ್ತಾನಿ ಸೇನಾ ನೆಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದು, 40 ಪಾಕ್ ಯೋಧರನ್ನು ಕೊಲ್ಲಲಾಗಿದೆ. ಈ ಪೈಕಿ 13 ಯೋಧರ ಶವಗಳನ್ನು ಆಫ್ಘಾನಿಸ್ತಾನಕ್ಕೆ ತರಲಾಗಿದೆ ಎಂದು ಆಫ್ಘಾನ್ ರಕ್ಷಣಾ ಸಚಿವಾಲಯ ಪ್ರತಿಪಾದಿಸಿದೆ. ಪಾಕ್‌ನ ಕೆಲವು ಯೋಧರನ್ನು ಜೀವಂತ ಸೆರೆ ಹಿಡಿಯಲಾಗಿದೆ ಎಂದು ಆಫ್ಘಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
