Friday, April 11, 2025
Homeಇದೀಗ ಬಂದ ಸುದ್ದಿಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಜಾರಿ : ಗುಂಡೂರಾವ್

ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಜಾರಿ : ಗುಂಡೂರಾವ್

ಬೆಂಗಳೂರು, ಡಿ. 2- ಭ್ರೂಣ ಹತ್ಯೆ ತಡೆಗೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಡ್ಯ ಹಾಗೂ ಮಂಗಳೂರಿನಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣಹತ್ಯೆ ಅತ್ಯಂತ ಹೇಯ ಮತ್ತು ಖಂಡನೀಯ ಕೃತ್ಯ. ಇದು ಸಮಾಜದ ಮನಸ್ಥಿತಿ, ಸಾಮಾಜಿಕ ಪಿಡುಗು ಕೂಡ ಆಗಿದೆ. ಈಗಾಗಲೇ ಇರುವ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಬದಲಾವಣೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

ಇಂತಹ ಕೃತ್ಯಗಳನ್ನು ತಡೆಯಲು ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕಿದೆ. ಗುಪ್ತಚರ ಮಾಹಿತಿಯನ್ನು ಕಲೆ ಹಾಕಬೇಕು. ಅದರ ಆಧಾರದ ಮೇಲೆ ಪಿಡುಗನ್ನು ತಡೆಯಬೇಕಿದೆ ಎಂದು ಹೇಳಿದರು.

ವೈದ್ಯರಾಗಿದ್ದ ಸತೀಶ್ ಆತ್ಮಹತ್ಯೆ ಕುರಿತಂತೆ ತಾವು ಪ್ರತಿಕ್ರಿಯಿಸುವುದಿಲ್ಲ. ಅವರು ಪಿರಿಯಾಪಟ್ಟಣದಲ್ಲಿ ಆಯುರ್ವೇದ ವೈದ್ಯರಾಗಿದ್ದರು. ಮಂಡ್ಯದಲ್ಲಿ ಆಲೋಪತಿ ಕ್ಲಿನಿಕ್ ನಡೆಸುತ್ತಿದ್ದರು. ಭ್ರೂಣಹತ್ಯೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ಸಾರ್ವಜನಿಕರೇ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ರಾಜ್ಯಶಿಕ್ಷಣ ನೀತಿ ನಮ್ಮ ಆದ್ಯತೆ : ಸಚಿವ ಮಧು ಬಂಗಾರಪ್ಪ

ಡಯಾಲಿಸಿಸ್ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ 20 ತಿಂಗಳಿನಿಂದಲೂ ವೇತನ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಗುತ್ತಿಗೆ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ವೇತನ ಪಾವತಿಸಲು ಒತ್ತಡ ಹೇರಲಾಗುತ್ತಿದೆ. ಇಎಸ್‍ಐ, ಪಿಎಫ್ ಸೌಲಭ್ಯದ ಹಣವನ್ನು ಸರ್ಕಾರದಿಂದಲೇ ಪಾವತಿಸಬೇಕಾದರೆ ಗುತ್ತಿಗೆ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕಿದೆ. ಅದಕ್ಕೆ ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

ಡಯಾಲಿಸಿಸ್ ತೊಂದರೆಗಳ ನಿರ್ವಹಣೆಗೆ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಸೇವೆಯನ್ನು ಜಾರಿಗೆ ತರಲಾಗಿದೆ. ಬಹಳಷ್ಟು ಕಡೆ ಡಯಾಲಿಸಿಸ್ ಯಂತ್ರಗಳು ಕೆಟ್ಟು ಹೋಗಿವೆ. ಅದನ್ನು ಬದಲಾವಣೆ ಮಾಡಲಾಗುತ್ತಿಲ್ಲ. ಸರ್ಕಾರ ಎಲ್ಲಾ ರೀತಿಯ ಸಹಕಾರ ಕೊಡುತ್ತಿದೆ. ಯಂತ್ರಗಳ ಬದಲಾವಣೆ ಹಾಗೂ ಸಿಬ್ಬಂದಿಗಳ ವರ್ಗಾವಣೆ ಗುತ್ತಿಗೆ ಪಡೆದಿರುವ ಸಂಸ್ಥೆಗಳ ಹೊಣೆಗಾರಿಕೆ. ಅವರು ಅದನ್ನು ಮಾಡದೇ ಇದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಹೊಸದಾಗಿ ಟೆಂಡರ್ ಕರೆಯಲಾಗಿದ್ದು, ಡಯಾಲಿಸಿಸ್ ಯಂತ್ರಗಳನ್ನು ಬದಲಾವಣೆ ಮಾಡಲಾಗುವುದು. ಒಂದು ವೇಳೆ ಆಗಲೂ ಸರಿ ಹೋಗದೇ ಇದ್ದರೆ ಏನು ಮಾಡಬೇಕು ಎಂಬುದನ್ನು ಪರಿಶೀಲನೆ ನಡೆಸಲಾಗುವುದು. ಸಿಬ್ಬಂದಿಗಳ ಹಿತರಕ್ಷಣೆಗೆ ಸರ್ಕಾರ ಆದ್ಯತೆ ನೀಡುತ್ತಿದೆ, ಬೇಡಿಕೆಗಳನ್ನು ಈಡೇರಿಸಲು ಚರ್ಚೆ ನಡೆಯುತ್ತಿದೆ. ಒಂದು ವೇಳೆ ಸಿಬ್ಬಂದಿಗಳು ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಮರಳದಿದ್ದರೆ ಜಿಲ್ಲಾ ಆರೋಗ್ಯಧಿಕಾರಿಗಳೇ ಲಭ್ಯವಿರುವ ಸಿಬ್ಬಂದಿಗಳನ್ನು ಬಳಸಿಕೊಂಡು ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

RELATED ARTICLES

Latest News