ಬೆಂಗಳೂರು, ಮಾ.3- ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತೊಂದು ಬರೆ ಬೀಳಲಿದ್ದು, ಖಾಸಗಿ ಶಾಲೆಗಳು ಶೈಕ್ಷಣಿಕ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಲು ಮುಂದಾಗಿವೆ.
ವಾರ್ಷಿಕವಾಗಿ ಶೇ. 8ರಿಂದ 10 ರಷ್ಟು ಶುಲ್ಕ ಏರಿಕೆ ಸ್ವಾಭಾವಿಕ ಎನ್ನಲಾಗುತ್ತಿದೆ. ಆದರೆ ಈ ಭಾರಿ ಶೇ.15ರ ವರೆಗೂ ಶುಲ್ಕ ಹೆಚ್ಚಿಸಲು ಖಾಸಗಿ ಶಾಲೆಗಳು ಮುಂದಾಗಿರುವುದು ಜನ ಸಾಮಾನ್ಯರ ಪೇಚಾಟಕ್ಕೆ ಕಾರಣವಾಗಿದೆ.
ಕ್ಯಾಮ್ಸೌ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಶುಲ್ಕ ಹೆಚ್ಚಳದ ಮುನ್ಸೂಚನೆ ನೀಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶುಲ್ಕ ಹೆಚ್ಚಳ ಜಾರಿಗೆ ಬರಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಪ್ರತಿ ವರ್ಷ ಶೇ. 8ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡಲಾಗುತ್ತಿತ್ತು. 2026-27ನೇ ಸಾಲಿಗೆ ಶೇ. 15 ರಷ್ಟು ಶುಲ್ಕ ಹೆಚ್ಚಳ ಮಾಡುತ್ತಿರುವುದಾಗಿ ತಿಳಿಸಲಾಗಿದೆ. ಕೆಲವು ಶಾಲೆಗಳು ತಮ ಅನುಕೂಲಕ್ಕೆ ತಕ್ಕ ಹಾಗೆ ಶುಲ್ಕ ಏರಿಕೆ ಮಾಡಲಿವೆ. ಕನಿಷ್ಠ ಶೇ. 8 ರಿಂದ ಗರಿಷ್ಠ 15ರ ವರೆಗೂ ಶುಲ್ಕ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಮನಸ್ಸೋ ಇಚ್ಚೇ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಇದರಿಂದ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. 30 ರಿಂದ 40 ಲಕ್ಷ ರೂ.ಗಳಷ್ಟು ಮೂಲ ಸೌಕರ್ಯ ಬಳಕೆಯಾಗದೆ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದೆ. ಶಿಕ್ಷಕರ ವೇತನವೂ ಹೆಚ್ಚಾಗುತ್ತಿದೆ. ಹೀಗಾಗಿ ಶುಲ್ಕ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕದಲಷ್ಟೇ ಅಲ್ಲ, ದೇಶಾದ್ಯಂತ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿಯೇ 700 ರಿಂದ 800 ಖಾಸಗಿ ಶಾಲೆಗಳಿಗೆ ವರ್ಷ ಒಂದರಲ್ಲೇ ಅನುಮತಿ ನೀಡಲಾಗುತ್ತಿದೆ. ಇದರ ಮಧ್ಯೆ ಬಹು ರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಸಂಸ್ಥೆಗಳು ಶೈಕ್ಷಣಿ ಕ್ಷೇತ್ರಕ್ಕೆ ಕಾಲಿಟ್ಟಿದೆ. ಕೋಟ್ಯಂತರ ರೂ. ಬಂಡವಾಳ ಹೂಡಿಕೆ ಮಾಡಿ ಶಾಲೆ ಆರಂಭಿಸುತ್ತಿವೆ. ಅದಕ್ಕನುಗುಣವಾಗಿಯೇ ಶುಲ್ಕವೂ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಎಲ್ಲವೂ ವಾಣಿಜೀಕರಣವಾಗಿದೆ. ಯಾವುದು ಸೇವೇಯಾಗಿ ಉಳಿದಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ನಷ್ಟದ ಕೆಲಸ. ಇದರ ಜೊತೆಗೆ ಅನಧಿಕೃತ ಶಾಲೆಗಳ ಹಾವಳಿಯೂ ಇದೆ ಎಂದು ಹೇಳಿದರು.
