Sunday, April 19, 2026
Homeರಾಜ್ಯಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಇಂಧನ ಸೆಸ್‌‍ ಹೆಚ್ಚಳಕ್ಕೆ ಮುಂದಾದ ಸರ್ಕಾರ..?!

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಇಂಧನ ಸೆಸ್‌‍ ಹೆಚ್ಚಳಕ್ಕೆ ಮುಂದಾದ ಸರ್ಕಾರ..?!

Government moves to increase fuel cess to fund guarantee schemes..?!

ಬೆಂಗಳೂರು,ಮಾ.3- ಉಳ್ಳವರು ಗ್ಯಾರಂಟಿಗಳನ್ನು ಬಡವರಿಗೆ ಬಿಟ್ಟುಕೊಡುವಂತೆ ಕರೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಇದೀಗ ಬಜೆಟ್‌ನಲ್ಲಿ ಇಂಧನದ ಮಾರಾಟ ಮೇಲಿನ ಸೆಸ್‌‍ ಹೆಚ್ಚಳ ಮಾಡಲು ಮುಂದಾಗಿದೆ.

ಮಹತ್ವಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ, ಬೇರೆ ಬೇರೆ ಮೂಲಗಳಿಂದ ಆದಾಯ ಸರಿದೂಗಿಸಲು ಭಾರೀ ಸರ್ಕಸ್‌‍ ನಡೆಸುತ್ತಿದೆ. ಹೀಗಾಗಿಯೇ ಆರ್ಥಿಕವಾಗಿ ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಪಡೆಯದೆ ಉದಾರತೆ ತೋರಿ ಎಂದು ಸಚಿವರು ಪ್ರತಿನಿತ್ಯ ಹೇಳುತ್ತಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಬಡತನ ರೇಖೆಗಿಂತ ಕೆಳಗಿರುವವರಿಗೆ ( ಬಿಪಿಎಲ್‌ ) ಉಜ್ವಲ ಯೋಜನೆಯನ್ನು ಜಾರಿ ಮಾಡಿದ್ದರು. ಪರಿಣಾಮ ಲಕ್ಷಾಂತರ ಜನರು ಮೋದಿ ಕರೆಗೆ ಓಗೊಟ್ಟು ಯೋಜನೆಯನ್ನು ತ್ಯಜಿಸಿದ್ದರು. ಈಗ ಸಿ.ಎಂ ಸಿದ್ದರಾಮಯ್ಯ ಕೂಡ ಇದೇ ತಂತ್ರವನ್ನು ಅನುಕರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ತಮ ದಾಖಲೆಯ 17ನೇ ಬಜೆಟ್‌ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೆಟ್ರೋಲ್‌-ಡೀಸೆಲ್‌ ಮಾರಾಟದ ಮೇಲಿನ ಸೆಸ್‌‍ ಮೇಲ್ತೆರಿಗೆ ಹೆಚ್ಚಳ ಮಾಡಲಿದ್ದಾರೆ. ಅಂದರೆ ಪ್ರತಿ 1 ಲೀಟರ್‌ ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲಿನ ಮಾರಾಟದಲ್ಲಿ 2 ರೂ. ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈ ಹಿಂದೆ ರಾಜ್ಯ ಸರ್ಕಾರ 2025ರ ಏಪ್ರಿಲ್‌ 2ರಂದು ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲಿನ ದರವನ್ನು ಕ್ರಮವಾಗಿ 2 ರೂಪಾಯಿಗೆ ಏರಿಕೆ ಮಾಡಿತ್ತು. ಕರ್ನಾಟಕದಲ್ಲಿ ಪ್ರಸ್ತುತ ಡೀಸೆಲ್‌ ಮೇಲಿನ ಮಾರಾಟ ತೆರಿಗೆ 21.77 ರೂ, ಇದ್ದರೆ ಅದೇ ರೀತಿ ಪೆಟ್ರೋಲ್‌ ಮೇಲಿನ ಮಾರಾಟ ತೆರಿಗೆಯು ರೂ. 18 ಇದೆ. ಹೊಸದಾಗಿ ಮಾರಾಟ ತೆರಿಗೆ ಹೆಚ್ಚಳ ಮಾಡಿದರೆ ವಾಹನ ಸವಾರರ ಜೀಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.

ಇಲಾಖೆಗಳಿಗೆ ನೀಡಿದ್ದ ರಾಜಸ್ವ ಸಂಗ್ರಹಣೆಯ ಗುರಿ ಈಗಾಗಲೇ ಅತಿಯಾಗಿದೆ. ಹೀಗಾಗಿ ಹೊಸ ಆದಾಯದ ಮೂಲಗಳನ್ನು ಅರಸುವುದು ಅನಿವಾರ್ಯವಾಗಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ 1 ರೂ. ಹೆಚ್ಚುವರಿ ಮಾರಾಟ ತೆರಿಗೆ ವಿಧಿಸುವುದರಿಂದ ತಕ್ಕಮಟ್ಟಿಗೆ ಸಂಪನೂಲ ಕ್ರೋಡೀಕರಣಕ್ಕೆ ವೇಗ ನೀಡಬಹುದೆಂದು ಚರ್ಚಿಸಲಾಗುತ್ತಿದೆ.

ಆದಾಯ ಖೋತಾ: ಸರಕಾರದ ಸ್ವಂತ ತೆರಿಗೆ ಮೂಲಗಳಿಂದ ವಾರ್ಷಿಕ ಗುರಿಯಷ್ಟು ಆದಾಯ ಸಂಗ್ರಹವಾಗುವುದು ಕಷ್ಟಸಾಧ್ಯವೆನಿಸಿದೆ. ಗುರಿ ತಲುಪಲು ಮಾರ್ಚ್‌ ಅಂತ್ಯದೊಳಗೆ 48,306 ಕೋಟಿ ರೂ. ಸಂಗ್ರಹವಾಗಬೇಕಿದ್ದು, ಅಬಕಾರಿ ಇಲಾಖೆ ಹೊರತುಪಡಿಸಿ ಉಳಿದ ಮೂರು ಮೂಲಗಳಿಂದ ವಾರ್ಷಿಕ ಗುರಿ ಸಾಧನೆ ಅನುಮಾನವೆನಿಸಿದೆ.

ವಾಣಿಜ್ಯ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ತೆರಿಗೆಯಿಂದ ಸುಮಾರು 15,000 ಕೋಟಿ ರೂ.ನಷ್ಟು ಆದಾಯ ಕೈತಪ್ಪುವ ಲಕ್ಷಣ ಕಾಣುತ್ತಿದೆ. ಇದು ಸರಕಾರದ ವೆಚ್ಚ, ಬಜೆಟ್‌ ಗಾತ್ರದ ಮೇಲೆ ಪರಿಣಾಮ ಬೀರಲಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ 83,200 ಕೋಟಿ ರೂ. ವಿನಿಯೋಗಿಸುವುದಾಗಿ ಸರಕಾರ ಹೇಳುತ್ತಿದ್ದರೂ ತೆರಿಗೆ ಆದಾಯ ತಗ್ಗಿದರೆ ಅಭಿವೃದ್ಧಿ ಯೋಜನೆಗಳಿಗೆ ಬಳಕೆಯಾಗುವ ಅನುದಾನ ಕಡಿತವಾಗಲಿದೆ.

ವಾಣಿಜ್ಯ ತೆರಿಗೆ ಮೂಲದಿಂದ ಜನವರಿ ಅಂತ್ಯದವರೆಗೆ 90,229 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌‍ಟಿಯಿಂದ 66,605 ಕೋಟಿ ರೂ., ಮಾರಾಟ ತೆರಿಗೆಯಿಂದ 22,387 ಕೋಟಿ ರೂ. ಹಾಗೂ ವೃತ್ತಿ ತೆರಿಗೆಯಿಂದ 1,236 ಕೋಟಿ ರೂ. ಬೊಕ್ಕಸಕ್ಕೆ ಬಂದಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸೇರಿದಂತೆ ಇತರ ಶುಲ್ಕ ರೂಪದಲ್ಲಿ 20,500 ಕೋಟಿ ರೂ. ಆದಾಯ ಗಳಿಸಿದೆ.

ಬಾಕಿ ಎರಡು ತಿಂಗಳಲ್ಲಿ 7,500 ಕೋಟಿ ರೂ. ಸಂಗ್ರಹ ಅಸಾಧ್ಯವೆನಿಸಿದ್ದು, 3,000 ಕೋಟಿ ರೂ.ನಷ್ಟು ಆದಾಯ ಕೈತಪ್ಪುವ ಸಾಧ್ಯತೆ ಇದೆ. ಮೋಟಾರು ವಾಹನ ತೆರಿಗೆ ಸೇರಿದಂತೆ ಇತರೆ ಮೂಲಗಳಿಂದ ಮಾರ್ಚ್‌ ಅಂತ್ಯಕ್ಕೆ 15,000 ಕೋಟಿ ರೂ. ಸಂಗ್ರಹ ಗುರಿ ನೀಡಲಾಗಿದೆ. ಆದರೆ ಜನವರಿವರೆಗೆ ಕೇವಲ 10,594 ಕೋಟಿ ರೂ. ಸಂಗ್ರಹವಾಗಿದೆ. ಇನ್ನು ಎರಡು ತಿಂಗಳಲ್ಲಿ4,406 ಕೋಟಿ ರೂ. ಗಳಿಸಬೇಕಿದೆ.

ಮಾರ್ಚ್‌ ಅಂತ್ಯಕ್ಕೆ 15,000 ಕೋಟಿ ರೂ. ಆದಾಯ ಸಂಗ್ರಹ ಸವಾಲಾಗಿದ್ದು, 13,000 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. ಹಾಗಾಗಿ ವಾರ್ಷಿಕ ಗುರಿಯಲ್ಲಿ 2000 ಕೋಟಿ ರೂ. ನಷ್ಟು ಕೈತಪ್ಪುವ ಸಂಭವವಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

RELATED ARTICLES

Latest News