ಬೆಂಗಳೂರು, ಜು.24- ಬಿ ಖಾತಾ ದಿಂದ ಎ ಖಾತಾಗೆ ಪರಿವರ್ತನೆ ಪ್ರಕ್ರಿಯೆಯಲ್ಲಿ ಭಾರೀ ಗೋಲ್‌ಮಾಲ್ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಖಾತಾ ಪರಿವರ್ತನೆ ಶುಲ್ಕವನ್ನು ಶೇ.5 ರಿಂದ ಶೇ.2ಕ್ಕೆ ಇಳಿಸಲಾಗಿದೆ ಎಂದು ನಂಬಿಸಿ ನಾಗರೀಕರಿಂದ ಬೇರೆ ರೀತಿಯ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಬೆಂಗಳೂರು ಮಹಾನಗರದ ಐದು ನಗರ ಪಾಲಿಕೆಗಳು ವಿವಿಧ ಹೆಸರಿನಲ್ಲಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿವೆ ಎಂಬ ಅಂಕಿ ಅಂಶಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಸರ್ಕಾರ ಮೊದಲು ಮಾರ್ಗಸೂಚಿ ದರದ ಶೇ.5ರಷ್ಟು ಮೊತ್ತ ಪಾವತಿಸಿದರೆ ಎ ಖಾತಾ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು, ಸಾರ್ವಜನಿಕರ ಸ್ಪಂದನೆ ಕಡಿಮೆಯಾಗಿದ್ದರಿಂದ ಬಳಿಕ ಅದನ್ನು ಶೇ.2ಕ್ಕೆ ಇಳಿಸಿ 100 ದಿನಗಳ ವಿಶೇಷ ಅವಕಾಶ ನೀಡಿತ್ತು.ಈ ಅವಕಾಶದ ಹಿನ್ನೆಲೆಯಲ್ಲಿ ಸಾವಿರಾರು ನಾಗರಿಕರು ಬಿ ಖಾತೆಯನ್ನು ಎ ಖಾತಾಗೆ ಪರಿವರ್ತಿಸಿಕೊಳ್ಳಲು ಮುಂದಾಗಿದ್ದರು.
ಆದರೆ ಅಸಲಿ ವಿಷಯ ಇರೋದೆ ಇಲ್ಲಿ ಶುಲ್ಕವನ್ನು ಶೇ.3 ರಷ್ಟು ಇಳಿಸಲಾಗಿದೆ ಎಂದು ಹೇಳಿಕೊಳ್ಳುವ ಸರ್ಕಾರ ಇದೇ ವೇಳೆ ವಿವಿಧ ಹೆಸರಿನಲ್ಲಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸಿ ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಹಾಕಲಾಗುತ್ತಿದೆ ಎಂದು ರಮೇಶ್ ಮಾಹಿತಿ ನಿಡಿದ್ದಾರೆ.
ಭೂ ಬಳಕೆ ಬದಲಾವಣೆ ಶುಲ್ಕ, ಏಕ ನಿವೇಶನ ಅನುಮೋದನೆ ಶುಲ್ಕ, ಸುಧಾರಣಾ ಶುಲ್ಕ ಹಾಗೂ ಭೂ ಪರಿವರ್ತನೆ ಶುಲ್ಕಗಳ ಜೊತೆಗೆ ಸಾಫ್‌್ಟವೇರ್ ಶುಲ್ಕ, ಹೆಚ್ಚುವರಿ ಶುಲ್ಕ, ಕೆರೆ ಪುನಶ್ಚೇತನ ಶುಲ್ಕ, ನೀರು ಸರಬರಾಜು ಉಪಕರ, ವರ್ತುಲ ರಸ್ತೆ ನಿರ್ಮಾಣ ಉಪಕರ, ಕೊಳಗೇರಿ ಅಭಿವೃದ್ಧಿ ಉಪಕರ ಹಾಗೂ ಪರಿಶೀಲನಾ ಶುಲ್ಕ ಸೇರಿದಂತೆ ಒಟ್ಟು ಏಳು ವಿಧದ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಶುಲ್ಕಗಳಿಂದ ಪ್ರತಿಯೊಬ್ಬ ಅರ್ಜಿದಾರರಿಂದ ಸುಮಾರು 9,500 ರಿಂದ 33,600ವರೆಗೆ ಹೆಚ್ಚುವರಿ ಮೊತ್ತ ವಸೂಲಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಈ ಕ್ರಮದಿಂದ ಅಮಾಯಕ ನಾಗರಿಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ ಶುಲ್ಕಗಳನ್ನು ತಕ್ಷಣವೇ ರದ್ದುಪಡಿಸಿ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಿಸಿಕೊಳ್ಳುವ ನಾಗರಿಕರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ರಮೇಶ್ ಮನವಿ ಮಾಡಿಕೊಂಡಿದ್ದಾರೆ. ಇದೇ ವಿಷಯವಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೂ ಎನ್. ಅರ್.ರಮೇಶ್ ಪತ್ರ ಬರೆದಿದ್ದಾರೆ.
