ಬೆಂಗಳೂರು,ಜು.24- ಕರ್ನಾಟಕ ಲೋಕಸೇವಾ ಆಯೋಗವು ಈಗ ಅರ್ಹತೆಯ ಅಳಲು ತೀರಿಸುವ ಸಂಸ್ಥೆಯಾಗಿ ಉಳಿದಿಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ನೇರ ಪ್ರತಿಬಿಂಬವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಪ್ರತಿ ಹುದ್ದೆಗೆ ಬರೋಬ್ಬರಿ 80 ಲಕ್ಷ ರೂ.ಗಳ ಡೀಲ್ ನಡೆದಿರುವ ಕುರಿತಾದ ಆಡಿಯೋ ವೈರಲ್ ಆಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಇದು ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಕನಸು ಹಾಗೂ ವಿಶ್ವಾಸಕ್ಕೆ ಮಾಡಿರುವ ದೊಡ್ಡ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಕಪಿಮುಷ್ಠಿಯಲ್ಲಿರುವ ಕೆಪಿಎಸ್‌ಸಿಯ ದುಸ್ಥಿತಿಯನ್ನು ಕೆ- ಕ್ಯಾಶ್ , ಪಿ- ಪೋಸ್ಟ್ , ಎಸ್- ಸೆಟಲ್‌ಮೆಂಟ್, ಸಿ- ಕಾಂಗ್ರೆಸ್ ಎಂದು ಅಶೋಕ್ ವ್ಯಾಖ್ಯಾನಿಸಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಈ ಗಂಭೀರ ಹಗರಣದ ಕುರಿತು ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ? ಎಂದು ನೇರ ಪ್ರಶ್ನೆ ಮಾಡಿದ್ದಾರೆ. ಉದ್ಯೋಗವನ್ನು ರಾಜಾರೋಷವಾಗಿ ಮಾರಾಟದ ವಸ್ತುವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಸಂಬಂಧ ಆರ್. ಅಶೋಕ್ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದಾರೆ.
ನೇಮಕಾತಿ ಸ್ಥಗಿತ/ರದ್ದು- ವಿವಾದಿತ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಅಥವಾ ಸಂಪೂರ್ಣವಾಗಿ ರದ್ದುಪಡಿಸಬೇಕು. ಈ ಸಂಪೂರ್ಣ ಪ್ರಕರಣದ ಕುರಿತು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ದಲ್ಲಾಳಿಗಳು, ಭ್ರಷ್ಟ ಅಧಿಕಾರಿಗಳು ಹಾಗೂ ಇದರ ಹಿಂದೆ ಕೈವಾಡವಿರುವ ಪ್ರತಿಯೊಬ್ಬ ಪ್ರಭಾವಿ ವ್ಯಕ್ತಿಯ ವಿರುದ್ಧವೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
