ಬೆಳಗಾವಿ,ಡಿ.4- ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ.2015ರಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನಪರಿಷತ್‍ನಲ್ಲಿ 1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿ ಅಂಗೀಕರಿಸಿದ ಮಸೂದೆಯನ್ನು ಕೇಂದ್ರ ಸರ್ಕಾರದ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು.
ಆದರೆ, ಕೇಂದ್ರ ಸರ್ಕಾರವು ಮಾತೃಭಾಷೆನ್ನು ಕಡ್ಡಾಯಗೊಳಿಸುವುದು, ಶಿಕ್ಷಣದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಮಸೂದೆಯನ್ನು ತಿರಸ್ಕಾರ ಮಾಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಬಹಿರಂಗಪಡಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಯು.ಬಿ.ವೆಂಕಟೇಶ್ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ರಾಜ್ಯದ ಈ ವಿಧೇಯಕವನ್ನು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕೇಂದ್ರ ಶಿಕ್ಷಣ ಇಲಾಖೆ ತಿರಸ್ಕರಿಸಿದೆ ಎಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಆಗ ಯು.ಬಿ.ವೆಂಕಟೇಶ್ ಅವರು, 2015ರಲ್ಲಿ ರಾಜ್ಯ ಸರ್ಕಾರ ಎರಡು ಸದನಗಳಲ್ಲಿ ಬಹುಮತದಿಂದ ಅಂಗೀಕರಿಸಿ ಕೇಂದ್ರ ಸರ್ಕಾರದ ಅಂಕಿತಕ್ಕೆ ಕಳುಹಿಸಿಕೊಟ್ಟಿತ್ತು. 1ರಿಂದ 5ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಶಾಲಾ ಮಕ್ಕಳಿಗೆ ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ, ಇಲ್ಲವೇ ಮಾತೃ ಭಾಷೆಯನ್ನಾಗಿ ಕಡ್ಡಾಯಗೊಳಿಸಬೇಕೆಂಬುದು ಈ ಮಸೂದೆಯ ಮೂಲ ಉದ್ದೇಶ. ನಮ್ಮ ಮಕ್ಕಳಿಗೆ ನಾವೇ ಕನ್ನಡ ಕಲಿಸಲು ಆದ್ಯತೆ ನೀಡದಿದ್ದರೆ ಹೇಗೆ? ರಾಜ್ಯ ಸರ್ಕಾರ ಪರ್ಯಾಯ ಮಾರ್ಗವನ್ನು ಹುಡುಕಲಿ ಎಂದು ಸಲಹೆ ಮಾಡಿದರು.
ಲೋಕಸಭೆಯಲ್ಲಿ ಮೊಳಗಿದ ‘ತೀಸ್ರಿ ಬಾರ್ ಮೋದಿ ಸರ್ಕಾರ್’ ಘೋಷಣೆ
ಕಳೆದ ಎಂಟು ವರ್ಷಗಳಿಂದ ಈ ವಿಧೇಯಕಕ್ಕೆ ಅನುಮೋದನೆ ಸಿಕ್ಕಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಸಂಸದರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿ. ನಮ್ಮ ಭಾಷೆಯನ್ನು ನಾವೇ ರಕ್ಷಣೆ ಮಾಡಿಕೊಳ್ಳಲು ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.
ಆಗ ಸಚಿವ ಮಧುಬಂಗಾರಪ್ಪ, ಪ್ರಥಮ ಭಾಷೆಯಾಗಿ ಕನ್ನಡವನ್ನು ಕಡ್ಡಾಯ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಮೀಡಿಯಂ ಆಫ್ ಸ್ಟಡೀಸ್‍ಗೆ ಸಂಬಂಸಿದ ಸುಪ್ರೀಂಕೋರ್ಟ್‍ನ ತೀರ್ಪಿನ ಹಿನ್ನಲೆಯಲ್ಲಿ ಕಡ್ಡಾಯ ಮಾಡಲು ಬರುವುದಿಲ್ಲ ಎಂದು ರಾಜ್ಯ ಸರ್ಕಾರ ಕಳುಹಿಸಿದ ಮಸೂದೆಯನ್ನು ತಿರಸ್ಕರಿಸಿದೆ ಎಂದರು. ಆಗ ಯು.ಬಿ.ವೆಂಕಟೇಶ್, ಈ ಮಸೂದೆಯನ್ನು ಕೇಂದ್ರ ತಿರಸ್ಕರಿಸಿದೆ ಎಂದರೆ ಕೇಂದ್ರ ಸರ್ಕಾರ ನಮ್ಮ ಮೇಲೆ ಬಲವಂತವಾಗಿ ಹಿಂದಿ ಹೇರುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಷ್ಟಪಡಿಸಿದ ಮಧುಬಂಗಾರಪ್ಪ, ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಲು ಬರುವುದಿಲ್ಲ. ಹಿಂದಿ ಹೇರಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.