ಬೆಳಗಾವಿ, ಡಿ.6- ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗಳ ಅನುದಾನ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆ ವಿಧಾನಸಭೆಯಲ್ಲಿಂದು ಪ್ರಸ್ತಾಪ ವಾಗಿ ಕೋಲಾಹಲದ ವಾತಾವರಣ ಸೃಷ್ಟಿಸಿತು.ಪ್ರಶ್ನೋತ್ತರದ ಬಳಿಕ ಬಿಜೆಪಿಯ ಸುನಿಲ್ಕುಮಾರ್ ವಿಷಯ ಪ್ರಸ್ತಾಪಿಸಿ ಹುಬ್ಬಳ್ಳಿಯಲ್ಲಿ ನಡೆದ ಮೌಲಿಗಳ ಸಮಾವೇಶದಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದ್ದಾರೆ.
ಎಷ್ಟು ಹಣ ಕೊಡು ತ್ತಾರೆ, ಯಾರಿಗೆ ಕೊಡುತ್ತಾರೆ ಎಂದು ಪ್ರಶ್ನಿಸಿ ದರಲ್ಲದೆ, ಸದನ ನಡೆಯುವ ಸಂದರ್ಭದಲ್ಲಿ ಯಾವುದೇ ಹೊಸ ಯೋಜನೆಗಳ ಅನುದಾನವನ್ನು ಘೋಷಿಸಬಾರದು ಎಂಬ ನಿಯಮವಿದೆ. ಆದರೆ ಮುಖ್ಯಮಂತ್ರಿಯವರ ಈ ಹೇಳಿಕೆ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯ ಅರಗ ಜ್ಞಾನೇಂದ್ರ, ಚಂದ್ರಪ್ಪ, ಅಶ್ವತ್ಥನಾರಾಯಣ ಸೇರಿದಂತೆ ಹಲವಾರು ಮಂದಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರದ ವತಿಯಿಂದ ಪ್ರತ್ಯುತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರನ್ನು ಕೇಳಿಯೇ ಮುಖ್ಯಮಂತ್ರಿಯವರು ಮಾತನಾಡಲಾಗುವುದಿಲ್ಲ. ವಿರೋಧಪಕ್ಷಗಳು ಹೇಳಿದಂತೆ ಸರ್ಕಾರ ನಡೆಸಲು ಸಾಧ್ಯವಿಲ್ಲ. 10 ಸಾವಿರ ಕೋಟಿ ರೂ.ಗಳ ಅನುದಾನ ನೀಡಬೇಕಾದರೆ ಇದೇ ಅವೇಶನದಲ್ಲಿ ಬಿಲ್ ಮಂಡಿಸುತ್ತೇವೆ. ಹೊರಗೆ ಮಾತನಾಡುವುದನ್ನೆಲ್ಲಾ ಇಲ್ಲಿ ಪ್ರಸ್ತಾಪಿಸುವುದು, ಆಕ್ಷೇಪಿಸುವುದು ಸರಿಯಲ್ಲ ಎಂದರು.ಸಚಿವರಾದ ದಿನೇಶ್ಗುಂಡೂರಾವ್ ಸೇರಿದಂತೆ ಆಡಳಿತ ಪಕ್ಷದ ಶಾಸಕರು ಬಿಜೆಪಿಯವರ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ 8000ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಅಧಿಕೃತವಾಗಿ ಸ್ಪಷ್ಟನೆ ನೀಡಿ ತಾವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮುಖ್ಯಮಂತ್ರಿಯವರು ಈ ವರ್ಷವೇ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದು ಹೇಳಿಲ್ಲ. ಈಗಾಗಲೇ 2 ರಿಂದ 3 ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದೇವೆ. ಮುಂದಿನ ವರ್ಷ ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು 10 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಇದರಲ್ಲಿ ಸದನದ ಸಂಪ್ರದಾಯಕ್ಕೆ ಧಕ್ಕೆಯಾಗುವ ಯಾವ ಅಂಶಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ವಾದ-ಪ್ರತಿವಾದ ಸುದೀರ್ಘ ಚರ್ಚೆಗೆ ಗ್ರಾಸವಾಯಿತು. ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ದ್ವೇಷ. ಅದಕ್ಕೆ ಮುಸ್ಲಿಂರ ಅಭಿವೃದ್ಧಿಗೆ ಹಣ ನೀಡುತ್ತೇವೆ ಎಂದಾಕ್ಷಣ ಗದ್ದಲ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.ಸಚಿವರಾದ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕ ಸಚಿವರು, ಮುಖ್ಯಮಂತ್ರಿಯವರು ಮುಂದಿನ ವರ್ಷ ಅನುದಾನವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಆಡಳಿತ ಪಕ್ಷದ ನರೇಂದ್ರಸ್ವಾಮಿ, ಕಂಚಿನ ಪ್ರತಿಮೆ ಮಾಡುತ್ತೇವೆ ಎಂದು ಹೇಳಿ ಪ್ಲಾಸ್ಟ್ ಆಫ್ ಪ್ಯಾರಿಸ್ ಪ್ರತಿಮೆ ನಿರ್ಮಿಸಿದ ವ್ಯಕ್ತಿಗಳು ಇಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸುನಿಲ್ಕುಮಾರ್ರ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡು, ಮುಖ್ಯಮಂತ್ರಿಗಳ ಭಾಷಣವನ್ನು ನಾನು ಕೇಳಿದ್ದೇನೆ. 10 ಸಾವಿರ ಕೋಟಿ ರೂ.ಗಳನ್ನು ಈ ವರ್ಷವೇ ನೀಡುತ್ತೇವೆ ಎಂದಿದ್ದಾರೆ. ಇದು ಸರಿಯಲ್ಲ ಎಂದರು.
ಈ ವೇಳೆ ಬಸವರಾಜರಾಯರೆಡ್ಡಿಯವರು ಇದರ ಬಗ್ಗೆ ಪ್ರಸ್ತಾಪ ಮಾಡಿದರು. ಸಭಾಧ್ಯಕ್ಷ ಯು.ಟಿ.ಖಾದರ್ ವಿಪಕ್ಷ ನಾಯಕರ ಬಳಿ ಮನವಿ ಮಾಡಿಕೊಂಡು ಕ್ರಿಯಾಲೋಪ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಟ್ಟರು. ಮುಖ್ಯಮಂತ್ರಿಯವರ ಹೇಳಿಕೆ ಸದನದ ಶಿಷ್ಟಾಚಾರವಾಗಲಿ ಅಥವಾ ಹಕ್ಕುಚ್ಯುತಿಯ ಉಲ್ಲಂಘನೆಯಾಗಲಿ ಆಗುವುದಿಲ್ಲ ಎಂದು ಹೇಳಿದರು.ಪಾಯಿಂಟ್ ಆಫ್ ಆರ್ಡರ್ನಲ್ಲಿ ಪಾಯಿಂಟ್ ಇಲ್ಲ, ಆರ್ಡರ್ ಕೂಡ ಇಲ್ಲ. ಹಾಗಾಗಿ ರಾಯರೆಡ್ಡಿಯವರ ಮಾತುಗಳು ಕಡತಕ್ಕೆ ಹೋಗಬಾರದು ಎಂದು ಅರಗ ಜ್ಞಾನೇಂದ್ರ ಹೇಳಿದರು.
ಆರ್.ಅಶೋಕ್ರವರು ಚರ್ಚೆ ಮುಂದುವರೆಸಿ ಮುಖ್ಯಮಂತ್ರಿಯವರ ಹೇಳಿಕೆ ಸರಿಯಲ್ಲ ಎಂದು ಪ್ರತಿಪಾದಿಸಲಾರಂಭಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದರು. ವಿರೋಧಪಕ್ಷದ ನಾಯಕರುಗಳ ಮಾತುಗಳಿಗೆ ಅಡ್ಡಿಪಡಿಸಬೇಡಿ ಎಂದು ಸಭಾಧ್ಯಕ್ಷರು ಮನವಿ ಮಾಡಿದರು. ಆದರೂ ಕಾಂಗ್ರೆಸ್ ಸದಸ್ಯರು ಗಲಾಟೆ ಮಾಡಿದ್ದರಿಂದ ಸಿಟ್ಟಾದ ಆರ್.ಅಶೋಕ್, ವಿಪಕ್ಷ ನಾಯಕರು ಮಾತನಾಡುವಾಗ ಅಡ್ಡಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಮಾತನಾಡುವಾಗ ಅಡ್ಡಿಪಡಿಸುವ ತಾಕತ್ತು ನಮಗೂ ಇದೆ. ನಾವು 85 ಮಂದಿ ಇದ್ದೇವೆ ಎಂದು ಹೇಳಿದರು.
ಜೊತೆಗೆ ಬರ ಪರಿಸ್ಥಿತಿ ತೀವ್ರವಾಗಿದೆ. ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ನಿರ್ವಹಣೆಗೆ ತಕ್ಷಣಕ್ಕೆ 2 ಸಾವಿರ ಕೋಟಿ ರೂ. ನೀಡಿದರೆ ರೈತರಿಗೆ ಎಷ್ಟೋ ಅನುಕೂಲವಾಗಲಿದೆ. ಅದನ್ನು ಬಿಟ್ಟು ರಾಜಕೀಯ ಕಾರಣಕ್ಕಾಗಿ 10 ಸಾವಿರ ಕೋಟಿ ರೂ.ಗಳನ್ನು ಏಕೆ ಘೋಷಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ಶಾಸಕರು, ಬಿಜೆಪಿಯ ನಾಯಕರು ಎಷ್ಟೆಲ್ಲಾ ಘೋಷಣೆಗಳನ್ನು ಮಾಡಿದ್ದಾರೆ ಎಂಬುದು ನಮ್ಮ ಕಣ್ಣ ಎದುರಿಗಿದೆ. ಅದನ್ನೆಲ್ಲಾ ಇಲ್ಲಿ ಪ್ರಸ್ತಾಪ ಮಾಡುವುದು ಬೇಕಿಲ್ಲ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಮುಖ್ಯಮಂತ್ರಿಯ ಹೇಳಿಕೆ ವಿರುದ್ಧ ತೀವ್ರ ಕಿಡಿಕಾರಿದರು. ಚರ್ಚೆಗಳು ಕಾವೇರಿ ಬಹಳ ಹೊತ್ತು ಜಟಾಪಟಿಗೆ ಕಾರಣವಾಯಿತು.ಕಾಂಗ್ರೆಸ್ನ ಸಿ.ಎಸ್.ನಾಡಗೌಡ ಮಾತನಾಡಿ, ಸುನಿಲ್ಕುಮಾರ್ರ ಪ್ರಸ್ತಾಪ ಅನಗತ್ಯವಾಗಿತ್ತು. ಯಾವುದೇ ಪ್ರಮುಖ ವಿಚಾರವಲ್ಲ ಮತ್ತು ಗಣನೀಯ ಸಂಗತಿಗಳೂ ನಡೆದಿಲ್ಲ. ಆದರೂ ಶೂನ್ಯವೇಳೆಯನ್ನು ಬದಿಗಿರಿಸಿ ಚರ್ಚೆ ಮಾಡಿದ್ದೇಕೆ ಎಂದು ಕ್ರಿಯಾಲೋಪ ಪ್ರಸ್ತಾಪಿಸಿದರು.ಸಚಿವ ದಿನೇಶ್ಗುಂಡೂರಾವ್ ಸರ್ಕಾರದ ಪರವಾಗಿ ಎಚ್.ಕೆ.ಪಾಟೀಲರ ಅಭಿಪ್ರಾಯವನ್ನೇ ಪುನರುಚ್ಚರಿಸಿದರು. ಇದರಿಂದ ಬಿಜೆಪಿಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಖುದ್ದು ಮುಖ್ಯಮಂತ್ರಿಯವರೇ ಬಂದು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು.
ಸರ್ಕಾರದ ಉತ್ತರಗಳು ಸಮಾಧಾನಕರವಾಗಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.ಬರದ ಮೇಲಿನ ಚರ್ಚೆಯಲ್ಲಿ ಭಾಗವಹಿಸುವ ಬದಲು ಸಣ್ಣ ವಿಚಾರಕ್ಕಾಗಿ ಸಭಾತ್ಯಾಗ ಮಾಡುವುದು ಸರಿಯಲ್ಲ ಎಂದು ಸಭಾಧ್ಯಕ್ಷರು ಆಕ್ಷೇಪಿಸಿದರು.ಅದರ ಬಳಿಕ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ವಿಪಕ್ಷ ನಾಯಕರು ಮುಖ್ಯಮಂತ್ರಿಯವರಿಗೆ ಮಾತನಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇವರು ಇಲ್ಲಿಗೆ ಚರ್ಚೆ ಮಾಡಲು ಬರುತ್ತಾರೋ, ಜಗಳ ಆಡಲು ಬರುತ್ತಾರೋ ಎಂದು ಪ್ರಶ್ನೆ ಮಾಡಿದರು.
ವಿರೋಧ ಪಕ್ಷದ ನಾಯಕರ ಈ ಧೋರಣೆ ಸಂಸದೀಯ ವ್ಯವಹಾರಗಳಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲಿದೆ. ಕೂಡಲೇ ವಿರೋಧಪಕ್ಷದ ನಾಯಕರುಗಳು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದರು.ಸಚಿವ ಜಯಚಂದ್ರ, ತಾಕತ್ತಿನ ಪ್ರಶ್ನೆ ಮಾಡುವುದಾದರೆ ಕಾಂಗ್ರೆಸ್ನ ಶಾಸಕರ ಸಂಖ್ಯೆ 135 ರಷ್ಟಿದೆ. ನಾವು ಪ್ರಶ್ನೆ ಮಾಡಬಹುದು ಎಂದರು.ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರ ಬರದ ಮೇಲಿನ ಚರ್ಚೆಗೆ ಸಿದ್ಧವಿದೆ. ಆದರೆ ವಿರೋಧಪಕ್ಷಗಳಿಗೆ ಚರ್ಚೆ ಮಾಡಲು ಅವಕಾಶವಿಲ್ಲ. ಅದಕ್ಕಾಗಿ ಸಭಾತ್ಯಾಗದ ಮೂಲಕ ಫಲಾಯನವಾದ ಅನುಸರಿಸಿದ್ದಾರೆ ಎಂದು ಆಕ್ಷೇಪಿಸಿದರು. ಸದಸ್ಯ ಬಸವರಾಜರಾಯರೆಡ್ಡಿಯವರು ವಿಪಕ್ಷ ನಾಯಕರ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಬೇಕು ಎಂದು ಕ್ರಿಯಾಲೋಪದಡಿ ಪ್ರಸ್ತಾಪ ಮಾಡಿದರು.ಆದರೆ ಸಭಾಧ್ಯಕ್ಷರು ಕ್ರಿಯಾಲೋಪವನ್ನು ತಳ್ಳಿಹಾಕಿದರು.