Saturday, May 2, 2026
Homeರಾಜ್ಯ'ಗೃಹಜ್ಯೋತಿ' ಯೋಜನೆ ಮೇಲೂ ಯುದ್ಧದ ಎಫೆಕ್ಟ್ ಸಾಧ್ಯತೆ, ಮತ್ತೆ ಟೀಕೆಗೊಳಗಾಗುವುದೇ ಸರ್ಕಾರ..?

‘ಗೃಹಜ್ಯೋತಿ’ ಯೋಜನೆ ಮೇಲೂ ಯುದ್ಧದ ಎಫೆಕ್ಟ್ ಸಾಧ್ಯತೆ, ಮತ್ತೆ ಟೀಕೆಗೊಳಗಾಗುವುದೇ ಸರ್ಕಾರ..?

Iran war effect is also likely to 'Griha Jyothi' scheme

ಬೆಂಗಳೂರು, ಮಾ.13- ಇರಾನ್‌-ಇಸ್ರೇಲ್‌ ಮತ್ತು ಅಮೆರಿಕಾ ನಡುವಿನ ಯುದ್ಧದ ಪರಿಣಾಮ ರಾಜ್ಯಸರ್ಕಾರದ ಮಹತ್ವಕಾಂಕ್ಷಿಯ ಗೃಹಜ್ಯೋತಿ ಯೋಜನೆಯ ಮೇಲೆ ಪರಿಣಾಮ ಬೀರಲಿದ್ದು, ರಾಜ್ಯ ಸರ್ಕಾರ ಮತ್ತೇ ಟೀಕೆಗೆ ಒಳಗಾಗುವ ಸಾಧ್ಯತೆಯಿದೆ.

ಯುದ್ಧದ ಪರಿಣಾಮದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಲೂಬ್ರಿಕೆಂಟ್‌ ಸೇರಿದಂತೆ ತೈಲ ಉತ್ಪನ್ನಗಳ ಆಮದು ಕೂಡ ಗಾಸಿಗೊಂಡಿದೆ. ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಇಂಧನಗಳ ದರ ಏರಿಕೆಯ ಆತಂಕ ಒಂದುಕಡೆಯಾದರೆ, ಅಡುಗೆ ಅನಿಲದ ಕೊರತೆ ಜನ ಜೀವನವನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಸಾಂಪ್ರದಾಯಕ ಸೌದೆ ಒಲೆ ಹಾಗೂ ಇತರ ಪದ್ಧತಿಗಳನ್ನು ಕೈ ಬಿಟ್ಟು ಅಡುಗೆ ಅನಿಲಕ್ಕೆ ಶೇ. 99ರಷ್ಟು ಜನ ಅವಲಂಭಿತರಾಗಿದ್ದಾರೆ. ಈಗ ಅಡುಗೆ ಅನಿಲದ ಕೊರತೆ ಗೃಹಿಣಿಯರನ್ನು ಕಂಗಾಲಾಗುವಂತೆ ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕೊರತೆ ಇಲ್ಲ. ಪೂರೈಕೆ ಅಭಾದಿತವಾಗಲಿದೆ. ಜನರು ಆತಂಕಕ್ಕೊಳಗಾಗುವುದು ಬೇಡ ಎಂದು ಪದೇ ಪದೇ ಸ್ಪಷ್ಟನೆ ನೀಡುತ್ತಲೇ ಇವೆ. ಅಡುಗೆ ಸಿಲಿಂಡರ್‌ಗಳ ಕೊರತೆ ಇದೆ ಎಂದು ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಕೊರತೆ ಇರುವುದು, ಸಿಲಿಡಂರ್‌ಗಳ ಕೊರತೆ ವ್ಯತ್ಯಯವಾಗಿರುವುದು ಕಣ್ಣೆದುರಿಗೆ ಇದೆ.

ಈ ಮೊದಲೆಲ್ಲಾ ಸಿಲಿಂಡರ್‌ ಬುಕ್‌ ಮಾಡಿದರೆ ಗರಿಷ್ಠ 24 ಗಂಟೆಗೊಳಗಾಗಿ ಪೂರೈಕೆಯಾಗುತಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಸಿಲಿಂಡರ್‌ ಬುಕ್‌ ಮಾಡುವ ಐವಿಆರ್‌ ಸೇವೆಯನ್ನೇ ಕೆಲಕಾಲ ಅಮಾನತು ಗೊಳಿಸುವುದು ಇದ್ದಕ್ಕಿದ್ದಂತೆ ಚಾಲುಗೊಳಿಸುವ ಕಣ್ಣಾಮುಚ್ಚಾಲೆಯನ್ನು ತೈಲ ಕಂಪನಿಗಳು ಮಾಡುತ್ತಿವೆ.

ಅಡುಗೆ ಸಿಲಿಂಡರ್‌ಗಳ ಕೊರತೆಯಲ್ಲಿ ಉಳಿತಾಯಕ್ಕಾಗಿ ಗೃಹ ಬಳಕೆಗೆ ವಿದ್ಯುತ್‌ ವಲಯಗಳನ್ನೂ ಹೆಚ್ಚು ಬಳಸಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಿರುವುದರಿಂದಾಗಿ ಫ್ಯಾನ್‌, ಎಸಿ ಸೇರಿದಂತೆ ಇತರ ಮೂಲಗಳಿಗೆ ಹೆಚ್ಚು ವಿದ್ಯುತ್‌ ಬಳಕೆಯಾಗುತ್ತದೆ. ಅದರ ಜೊತೆಗೆ ಈ ಭಾರಿ ವಿದ್ಯುತ್‌ವಲಯಗಳ ಬಳಕೆಯೂ ಹೆಚ್ಚಿರುವುದರಿಂದ ವಿದ್ಯುತ್ತಿನ ಬಳಕೆ ಮತ್ತಷ್ಟು ಹೆಚ್ಚಾಗುತ್ತಿದೆ.

ವಿದ್ಯುತ್‌ ವೇದಿಕೆ ಗರಿಷ್ಠ ಮಟ್ಟ ತಲುಪಿ ಪರಿಸ್ಥಿತಿ ನಿಭಾಯಿಸಲು ಇಂಧನ ಇಲಾಖೆ ಪರದಾಡುವ ಸನ್ನಿವೇಶವು ಸೃಷ್ಟಿಯಾಗುತ್ತಿದೆ. ಪಂಚಖಾತ್ರಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಈ ಹಿಂದೆ ಒಂದು ವರ್ಷ ಸರಾಸರಿ ಬಳಕೆಯ ವಿದ್ಯುತ್‌ ಅನ್ನು ಅಂದಾಜು ಮಾಡಿ ಅದಕ್ಕೆ ಹೆಚ್ಚುವರಿ ಶೇ. 10ರಷ್ಟನ್ನು ಸೇರ್ಪಡೆಗೊಳಿಸಿ ಗೃಹಜ್ಯೋತಿಯಡಿ ಅರ್ಹತಾ ಮೊತ್ತವನ್ನು ನಿರ್ಧರಿಸಲಾಗಿತ್ತು.

ಗ್ರಾಹಕರು ಒಂದು ವೇಳೆ ಅರ್ಹತೆಯ ಯೂನಿಟ್‌ಗಳನ್ನು ನೀಡಿ, ಬಳಸಿದ ಹೆಚ್ಚುವರಿ ವಿದ್ಯುತ್‌ಗೆ ಶುಲ್ಕ ಪಾವತಿಸಬೇಕಾಗುತ್ತಿತ್ತು. ಗೃಹಜ್ಯೋತಿ ಮೂಲ ನಿಯಮದ ಪ್ರಕಾರ ಗರಿಷ್ಠ 200 ಯೂನಿಟ್‌ಗಳ ಬಳಕೆಯನ್ನು ದಾಟಿದರೆ ಯೋಜನೆಯ ಸೌಲಭ್ಯ ಅನ್ವಯವಾಗುವುದಿಲ್ಲ. ಆಗ ಗ್ರಾಹಕರು ಸಂಪೂರ್ಣವಾದ ವಿದ್ಯುತ್‌ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಎರಡು ಭಾರಿ ವಿದ್ಯುತ್‌ ದರವನ್ನು ಪರಿಷ್ಕರಣೆ ಮಾಡಿದೆ. ದುಬಾರಿ ಶುಲ್ಕದಿಂದಾಗಿ ವಾಣಿಜ್ಯ ಬಳಕೆಯ ಗ್ರಾಹಕರು ಈಗಾಲೇ ಕಣ್ಣು, ಬಾಯಿ ಬಿಡುವಂತಾಗಿದೆ. ಗೃಹಜ್ಯೋತಿಯಡಿ ಉಚಿತ ವಿದ್ಯುತ್‌ ದೊರೆಯುತ್ತಿರುವುದರಿಂದಾಗಿ ಗೃಹ ಬಳಕೆಯ ಗ್ರಾಹಕರಿಗೆ ವಿದ್ಯುತ್‌ ಬಳಕೆಯ ಬಿಸಿ ತಟ್ಟಿರಲಿಲ್ಲ. ಈಗ ಅಡುಗೆ ಅನಿಲದ ಸಿಲಿಂಡರ್‌ಗಳ ಕೊರತೆಯಿಂದಾಗಿ ವಿದ್ಯುತ್‌ವಲಯಗಳ ಬಳಕೆ ಮತ್ತು ಬೇಸಿಗೆಯ ಪರಿಣಾಮದಿಂದಾಗಿ ಅರ್ಹತಾ ಯೂನಿಟ್‌ಗಳನಷ್ಟೇ ಅಲ್ಲದೇ, ಗೃಹಜ್ಯೋತಿಯ ಮೂಲ ನಿಯಮದ ಗರಿಷ್ಠ ಸಮಿತಿ 200 ಯೂನಿಟ್‌ಗಳನ್ನು ದಾಟಿ ವಿದ್ಯುತ್‌ ಬಳಕೆಯಾಗುವ ಸಾಧ್ಯತೆ ಇದೆ.

ಆ ವೇಳೆ ಗರಿಷ್ಠ 2000 ರೂ.ಗಳಷ್ಟು ವಿದ್ಯುತ್‌ ಬಿಲ್‌ ಪಾವತಿಸುವ ಸ್ಥಿತಿ ಮಧ್ಯಮ ವರ್ಗದ ಗ್ರಾಹಕರಿಗೆ ಬಂದೊದಗಲಿದೆ. ಆ ವೇಳೆ ಮತ್ತೆ ರಾಜ್ಯ ಸರ್ಕಾರಕ್ಕೆ ಜನ ಹಿಡೀ ಶಾಪ ಹಾಕುವ ಸಾಧ್ಯತೆಗಳಿವೆ.

ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಗೆ ಯುದ್ದವೇ ಕಾರಣ. ಜಾಗತಿಕ ಸಮಸ್ಯೆಯೆಂದು ಸಮಾಧಾನ ಪಡಿಸಿಕೊಳ್ಳುತ್ತಿರುವ ನಾಗರಿಕರು ಯಾವ ಸಂದರ್ಭದಲ್ಲೂ ಕೇಂದ್ರ ಸರ್ಕಾರವನ್ನು ಟೀಕಿಸುವ ಗೋಜಿಗೆ ಹೋಗಿಲ್ಲ. ಆದರೆ ವಿದ್ಯುತ್‌ ಶುಲ್ಕ ಪಾವತಿಸುವ ವೇಳೆಯಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ವಾಚಾಮಗೋಚರವಾಗಿ ತೆಗಳುವ ಎಲ್ಲಾ ಸಾಧ್ಯತೆಗಳಿವೆ.

RELATED ARTICLES

Latest News