Saturday, May 2, 2026
Homeಅಂತಾರಾಷ್ಟ್ರೀಯಕಾಬೂಲ್‌ನಲ್ಲಿರುವ ಆಸ್ಪತ್ರೆ ಮೇಲೆ ಪಾಕ್ ವಾಯು ದಾಳಿ, 400 ಮಂದಿ ಬಲಿ..!

ಕಾಬೂಲ್‌ನಲ್ಲಿರುವ ಆಸ್ಪತ್ರೆ ಮೇಲೆ ಪಾಕ್ ವಾಯು ದಾಳಿ, 400 ಮಂದಿ ಬಲಿ..!

400 killed in Pakistani strike on Kabul hospital: Taliban

ಕಾಬೂಲ್‌,ಮಾ.17-ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವಾಯು ದಾಳಿ ನಡೆಸಿದ್ದು, ದಾಳಿಯಲ್ಲಿ 400 ಜನರು ಸಾವನ್ನಪ್ಪಿ, 250 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಆಫ್ಘಾನಿಸ್ತಾನ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ದಾಳಿಯಾಗಿದೆ.

ರಾಜಧಾನಿ ಕಾಬೂಲ್‌ನಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ. ಸ್ಥಳೀಯ ಸಮಯ ರಾತ್ರಿ 9 ಗಂಟೆಗೆ ಪ್ರಬಲವಾದ ಸ್ಫೋಟಗಳು ನಗರವನ್ನು ನಡುಗಿಸಿದವು. ಭಯಭೀತರಾದ ನಿವಾಸಿಗಳು ಸುರಕ್ಷತೆಗಾಗಿ ಪಲಾಯನ ಮಾಡಿದರು. ರಂಜಾನ್‌ ಉಪವಾಸವನ್ನು ಮುರಿದ ನಂತರ ಕಾಬೂಲ್‌ ನಿವಾಸಿಗಳು ಹೊರಗೆ ಇದ್ದಾಗ ಈ ದಾಳಿ ಸಂಭವಿಸಿದೆ ಎಂದು ಎಂದು ಆಫ್ಘಾನಿಸ್ತಾನದ ಉಪಸರ್ಕಾರಿ ವಕ್ತಾರರು ತಿಳಿಸಿದ್ದಾರೆ.

ವಾಸ್ತವವಾಗಿ ಎರಡೂ ಕಡೆಯವರು ತಮ ಹಂಚಿಕೆಯ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದ್ದಾರೆ ಎಂದು ಅಫ್ಘಾನ್‌ ಅಧಿಕಾರಿಗಳು ಹೇಳಿದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ.ಆಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ವರ್ಷಗಳಲ್ಲಿ ನೆರೆಯ ದೇಶಗಳ ನಡುವಿನ ಅತ್ಯಂತ ಭೀಕರ ಹೋರಾಟವು ಮೂರನೇ ವಾರಕ್ಕೆ ಕಾಲಿಟ್ಟಾಗ ಈ ಘಟನೆ ಸಂಭವಿಸಿದೆ.

ಪಾಕಿಸ್ತಾನಿ ಸೇನೆಯು ಇತ್ತೀಚೆಗೆ ಕಾಬೂಲ್‌ನ 9ನೇ ಪೊಲೀಸ್‌‍ ಜಿಲ್ಲೆಯ ಮಾದಕವಸ್ತು ಪುನರ್ವಸತಿ ಕೇಂದ್ರದ ಮೇಲೆ ದಾಳಿ ನಡೆಸಿದ್ದು, ಇದರಿಂದಾಗಿ ಭಾರೀ ಸಾವು-ನೋವುಗಳು ಮತ್ತು ಆಸ್ತಿ ನಷ್ಟವಾಗಿದೆ. ಏತನಧ್ಯೆ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರವು ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

ಕಾಬೂಲ್‌ ನಗರದ ಹಲವು ಭಾಗಗಳಲ್ಲಿ ಆಕಸಿಕವಾಗಿ ಸ್ಫೋಟಗಳು ಸಂಭವಿಸಿವೆ. ಸ್ಫೋಟಗಳ ಬಳಿಕ ಪಶ್ಚಿಮ ಕಾಬೂಲ್‌ ಪ್ರದೇಶದ ಮೇಲೆ ಕಡಿಮೆ ಎತ್ತರದಲ್ಲಿ ಫೈಟರ್‌ಜೆಟ್‌ಗಳು ಹಾರಾಡುತ್ತಿರುವುದು ಕಂಡು ಬಂದಿದೆ. ಜೋರಾದ ಸ್ಫೋಟಗಳ ಧ್ವನಿಯಿಂದ ಜನರು ಬೆಚ್ಚಿಬಿದ್ದಿದ್ದಾರೆ.

ಆಫ್ಘಾನಿಸ್ತಾನದ ಉಪ ಸರ್ಕಾರದ ವಕ್ತಾರ ಹಮುಲ್ಲಾ ಫಿತ್ರಾತ್‌ ಅವರು ನೀಡಿದ ಮಾಹಿತಿ ಪ್ರಕಾರ, ಈ ದಾಳಿ ಮುಖ್ಯವಾಗಿ ಮಾದಕ ದ್ರವ್ಯ ಸೇವಕರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೆ ಗುರಿಯಾಗಿತ್ತು. ದಾಳಿಯಿಂದ ಆಸ್ಪತ್ರೆಯ ಬಹುತೇಕ ಭಾಗ ಸಂಪೂರ್ಣ ನಾಶವಾಗಿದೆ. ಅವಶೇಷಗಳಡಿ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಯ ಪರಿಣಾಮವಾಗಿ ಕಾಬೂಲ್‌ ನಗರದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗಾಯಾಳುಗಳನ್ನು ಸಮೀಪದ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ರಕ್ಷಣಾ ಕಾರ್ಯಗಳು ಇನ್ನೂ ಮುಂದುವರಿದಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿರುವುದು ದೃಢವಾಗಿದೆ.

ಇನ್ನೊಂದೆಡೆ ಪಾಕಿಸ್ತಾನದಿಂದ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಈ ನಡುವೆ, ಅಫ್ಘಾನಿಸ್ತಾನದ ಆಡಳಿತವು ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ಈ ಘಟನೆಯತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿರುವುದಾಗಿ ಆರೋಪಿಸಿದೆ.

ಆಫ್ಘಾನ್‌ ಸರ್ಕಾರದ ಆರೋಪಗಳನ್ನು ಪಾಕಿಸ್ತಾನ ನಿರಾಕರಿಸಿದೆ. ಇದು ಆಧಾರರಹಿತ ಆರೋಪ ಎಂದಿದೆ. ಕಾಬೂಲ್‌ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಪಾಕ್‌ ಸ್ಪಷ್ಟಪಡಿಸಿದೆ. ಅಫ್ಘಾನ್‌ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ಈ ದಾಳಿಯನ್ನು ಖಂಡಿಸಿದ್ದಾರೆ. ಪಾಕಿಸ್ತಾನವು ಆಸ್ಪತ್ರೆಗಳು ಮತ್ತು ನಾಗರಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಯಾನಕ ಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್‌ ಅವರು, ಕಾಬೂಲ್‌ ಮತ್ತು ಪೂರ್ವ ಪ್ರಾಂತ್ಯದ ನಂಗರ್ಹಾರ್‌ನಲ್ಲಿರುವ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆಯು ನಿಖರವಾದ ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ತಿಳಿಸಿದ್ದಾರೆ. ಕಾಬೂಲ್‌ನ ಎರಡು ಸ್ಥಳಗಳಲ್ಲಿ ತಾಂತ್ರಿಕ ಬೆಂಬಲ ಮೂಲಸೌಕರ್ಯ ಮತ್ತು ಮದ್ದುಗುಂಡು ಸಂಗ್ರಹಣಾ ಸೌಲಭ್ಯಗಳು ನಾಶವಾಗಿವೆ ಎಂದಿದ್ದಾರೆ.

ಎರಡೂ ಕಡೆಯವರು ತಮ ಸಾಮಾನ್ಯ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿ ಆಫ್ಘಾನಿಸ್ತಾನದಲ್ಲಿ ನಾಲ್ವರನ್ನು ಕೊಂದಿದ್ದಾರೆ ಎಂದು ಅಫ್ಘಾನ್‌ ಅಧಿಕಾರಿಗಳು ಹೇಳಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ವರ್ಷಗಳಲ್ಲಿ ನೆರೆಹೊರೆಯವರ ನಡುವಿನ ಅತ್ಯಂತ ಭೀಕರ ಹೋರಾಟವು ಮೂರನೇ ವಾರಕ್ಕೆ ಪ್ರವೇಶಿಸಿದೆ.ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್‌ ಅವರು ಅಫ್ಘಾನಿಸ್ತಾನದ ಜೊತೆ ಮುಕ್ತ ಯುದ್ಧ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವಿನ ಸಂಬಂಧಗಳು ಇತ್ತೀಚೆಗೆ ಮತ್ತಷ್ಟು ಹದಗೆಟ್ಟಿವೆ. ಗಡಿಭಾಗದಲ್ಲಿ ನಡೆಯುತ್ತಿರುವ ಸಂಘರ್ಷಗಳು, ದಾಳಿ-ಪ್ರತಿದಾಳಿಗಳು ಹಾಗೂ ಪರಸ್ಪರ ಆರೋಪಗಳು ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸಿವೆ.

ಅಫ್ಘಾನ್‌ ಆಸ್ಪತ್ರೆ ಮೇಲಿನ ಪಾಕ್‌ ದಾಳಿ ಖಂಡಿಸಿದ ರಶೀದ್‌ಖಾನ್‌

ಕಾಬೂಲ್‌‍, ಮಾ.17- ಅಫ್ಘಾನ್‌ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ದಾಳಿಯನ್ನು ಅಫ್ಘಾನಿಸ್ತಾನ ಕ್ರಿಕೆಟಿಗ ರಶೀದ್‌ಖಾನ್‌ ಖಂಡಿಸಿದ್ದಾರೆ. ಪವಿತ್ರ ರಂಜಾನ್‌ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯಿಂದ ಹತ್ಯೆ ನಡೆದಿದೆ ಎಂದು ರಶೀದ್‌ ಖಾನ್‌ ಕಿಡಿಕಾರಿದ್ದಾರೆ.

ಕಾಬೂಲ್‌ನಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಉಂಟಾದ ನಾಗರಿಕರ ಸಾವು-ನೋವುಗಳಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ನಾಗರಿಕರ ಮನೆಗಳು, ಶೈಕ್ಷಣಿಕ ಸೌಲಭ್ಯಗಳು ಅಥವಾ ವೈದ್ಯಕೀಯ ಮೂಲಸೌಕರ್ಯಗಳನ್ನು ಟಾರ್ಗೆಟ್‌ ಮಾಡುವುದು ತಪ್ಪು. ಇದು ಯುದ್ಧಾಪರಾಧ ಎಂದು ರಶೀದ್‌ ಖಾನ್‌ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪವಿತ್ರ ರಂಜಾನ್‌ ತಿಂಗಳಲ್ಲಿ ಜೀವಗಳ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುವುದು ಅಸಹ್ಯಕರ ಮತ್ತು ತೀವ್ರ ಕಳವಳಕಾರಿ. ಈ ನಡೆ ವಿಭಜನೆ ಮತ್ತು ದ್ವೇಷವನ್ನು ಹೆಚ್ಚಿಸುತ್ತದೆ. ದೌರ್ಜನ್ಯವನ್ನು ಕೂಲಂಕಷವಾಗಿ ತನಿಖೆ ಮಾಡಿ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕು ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ.ಈ ಕಷ್ಟದ ಸಮಯದಲ್ಲಿ ನಾನು ನನ್ನ ಆಫ್ಘನ್‌ ಜನರೊಂದಿಗೆ ನಿಲ್ಲುತ್ತೇನೆ ಎಂದು ರಶೀದ್‌ ಖಾನ್‌ ತಿಳಿಸಿದ್ದಾರೆ.

ಕಾಬೂಲ್‌ನ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಬಾಂಬ್‌ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ದಾಳಿಯಾಗಿದೆ. ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ 2,000 ಹಾಸಿಗೆ ಸೌಲಭ್ಯವಿರುವ ದೊಡ್ಡ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. 400 ಮಂದಿ ಸಾವಿಗೀಡಾಗಿದ್ದು, 250 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್‌ ಹೇಳಿದ್ದಾರೆ.

RELATED ARTICLES

Latest News