ಬೆಂಗಳೂರು, ಮಾ.17- ಅಸ್ತಿ ತೆರಿಗೆ ಪಾವತಿಸಲು ಕಳ್ಳಾಟ ಆಡುವ ಮಾಲೀಕರಿಗೆ ಬಿಸಿ ಮುಟ್ಟಿಸಲು ಜಿಬಿಎ ನಿರ್ಧರಿಸಿದೆ. ಆಸ್ತಿ ತೆರಿಗೆ ಪಾವತಿಸಲು ಸಾಧ್ಯವಾಗದ ಕಟ್ಟಡಗಳನ್ನು ಹರಾಜು ಹಾಕುವುದು ವಾಡಿದೆ. ಆದರೆ, ಹರಾಜಿನಲ್ಲಿ ಅಂತಹ ಆಸ್ತಿಗಳನ್ನು ಖರೀದಿಸಲು ಯಾರು ಮುಂದೆ ಬರದಿದ್ದರೆ ಅಂತಹ ಆಸ್ತಿಗಳನ್ನು ಜಿಬಿಎ ವತಿಯಿಂದಲೇ ಮುಟ್ಟುಗೋಲು ಹಾಕಿಕೊಳ್ಳುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಈಗಾಗಲೇ ಬಾಕಿ ಅಸ್ತಿ ತೆರಿಗೆ ವಸೂಲಿಗಾಗಿ ಒಟಿಎಸ್ (ಒನ್ ಟೈಮ್ ಸೆಟಲ್‌ಮೆಂಟ್) ಮೂಲಕ ವಿನಾಯಿತಿ ನೀಡಲಾಗಿತ್ತು. ಬಳಿಕ ಸುಮಾರು 7 ಲಕ್ಷ ಕಟ್ಟಡಗಳ ಮಾಲೀಕರಿಗೆ ಬಾಕಿ ತೆರಿಗೆ ಪಾವತಿಸಲು ನೋಟಿಸ್ ನೀಡಲಾಗಿದ್ದು, ತೆರಿಗೆ ಪಾವತಿಸದ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನೂ ಆರಂಭಿಸಲಾಗಿತ್ತು.
ಆದರೆ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರತಿಕ್ರಿಯೆ ಸಿಗದೆ, ಕೆಲವೇ ಕೆಲವು ಕಟ್ಟಡ ಮಾಲೀಕರು ಮಾತ್ರ ಬಾಕಿ ತೆರಿಗೆ ಪಾವತಿಸಿದ್ದಾರೆ. ಇನ್ನೂ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಕಟ್ಟಡ ಮಾಲೀಕರು ತೆರಿಗೆ ಪಾವತಿಸಿರಿಲಿಲ್ಲ. ಹರಾಜಿಗೆ ಬಿಡ್‌ದಾರರು ಆಸಕ್ತಿ ತೋರಿರಲಿಲ್ಲ.
ಹೀಗಾಗಿ ಇನ್ನು ಮುಂದೆ ಯಾರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ ಅಂತಹ ಆಸ್ತಿಯನ್ನು ಜಿಬಿಎ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನಿಷ್ ಮೌದ್ಗಿಲ್ ತಿಳಿಸಿದ್ದಾರೆ.ಬಾಕಿ ಇರುವ ಅಸ್ತಿ ತೆರಿಗೆ ಮೊತ್ತವನ್ನು ಪರಿಗಣಿಸಿ, ಉಳಿದ ಆಸ್ತಿಗೆ ಮಾರ್ಗಸೂಚಿ ದರ ಆಧಾರದಲ್ಲಿ ಬೆಲೆ ನಿಗದಿಪಡಿಸಿ, ಅದರ ಉಳಿದ ಹಣವನ್ನು ಕಟ್ಟಡ ಮಾಲೀಕರಿಗೆ ಹಿಂತಿರುಗಿಸುವ ಯೋಜನೆ ರೂಪಿಸಲಾಗಿದೆ.
ಬಾಕಿ ತೆರಿಗೆ ಪಾವತಿಸದಿದ್ದರೆ, ಜಿಬಿಎ ವ್ಯಾಪ್ತಿಗೆ ಒಳಪಡುವ ಸಂಬಂಧಿತ ನಗರಪಾಲಿಕೆ ಆ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲಿದೆ. ಬಳಿಕ ನಿರ್ದಿಷ್ಟ ಅವಧಿಯವರೆಗೆ ಬಾಕಿ ತೆರಿಗೆ ಪಾವತಿಸಲು ಅವಕಾಶ ನೀಡಲಾಗುತ್ತದೆ.ಆ ಅವಧಿಯಲ್ಲಿ ಕಟ್ಟಡ ಮಾಲೀಕರು ತೆರಿಗೆ ಪಾವತಿಸಲು ಮುಂದಾದರೆ, ವರ್ಗಾವಣೆ ವೆಚ್ಚ, ಬಾಕಿ ತೆರಿಗೆ, ದಂಡ ಹಾಗೂ ಬಡ್ಡಿ ಸೇರಿದಂತೆ ಎಲ್ಲಾ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಒಂದು ವೇಳೆ ಬಾಕಿ ತೆರಿಗೆ ಪಾವತಿಸದಿದ್ದರೆ ಆ ಆಸ್ತಿ ನಗರಪಾಲಿಕೆಯ ಹೆಸರಿನಲ್ಲೇ ಉಳಿಯಲಿದ್ದು, ಮುಂದಿನ ದಿನಗಳಲ್ಲಿ ಕಟ್ಟಡ ಮಾಲೀಕರಿಗೆ ಆ ಸ್ವತ್ತಿನ ಮೇಲೆ ಯಾವುದೇ ಹಕ್ಕು ಅಥವಾ ಮಾನ್ಯತೆ ಇರುವುದಿಲ್ಲ. ಅಲ್ಲದೆ ಆಸ್ತಿಯನ್ನು ಬೇರೆ ಯಾರಿಗೂ ವರ್ಗಾವಣೆ ಮಾಡುವ ಹಕ್ಕನ್ನೂ ಕಳೆದುಕೊಳ್ಳುತ್ತಾರೆ.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಬಾಕಿ ಅಸ್ತಿ ತೆರಿಗೆ ಪಾವತಿಸಿದರೆ ಈ ಕ್ರಮದಿಂದ ಮುಕ್ತಿ ಪಡೆಯಬಹುದು ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮೂನಿಷ್ ಮೌದ್ಗಿಲ್ ತಿಳಿಸಿದ್ದಾರೆ.
