ಬೆಳಗಾವಿ,ಡಿ.14- ಆನೆ, ಹುಲಿ ಮತ್ತು ಇತರೆ ಕ್ರೂರ ಮೃಗಗಳ ಸಂಘರ್ಷ ತಪ್ಪಿಸಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ವಿಧಾನಸೌಧದಲ್ಲಿಂದು ಪಕ್ಷಬೇಧ ಮರೆತು ಸದಸ್ಯರೆಲ್ಲರೂ ಆಗ್ರಹಿಸಿದರು. ಪ್ರಶ್ನೋತ್ತರದ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಪಿ.ಡಿ.ರಾಜೇಗೌಡ ವಿಷಯ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದ 18 ಗ್ರಾಮಗಳಲ್ಲಿ ನಿರಂತರವಾಗಿ ಆನೆ ದಾಳಿಗಳಾಗುತ್ತಿವೆ. ಒಂದೆಡೆ ಕುದುರೆಮುಖ ಮತ್ತೊಂದೆಡೆ ಅಭಯಾರಣ್ಯಗಳನ್ನು ಹೊಂದಿರುವ ತಮ್ಮ ಕ್ಷೇತ್ರದಲ್ಲಿ ವನ್ಯಜೀವಿಗಳ ಸಂಘರ್ಷ ಮರುಕಳಿಸುತ್ತಿದೆ.
ಕಂದಕ ಹಾಗೂತಂತಿ ಬೇಲಿಗಳ ನಿರ್ಮಾಣ ಪ್ರಯೋಜನವಾಗುತ್ತಿಲ್ಲ. ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಶಾಶ್ವತ ಪರಿಹಾರವಾಗಿದೆ. 225 ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸುವ ಯೋಜನೆಯಾಗಿದ್ದು, ಈ ವರ್ಷ 120 ಕೋಟಿ ರೂ. ಒದಗಿಸುವುದಾಗಿ ತಿಳಿಸಲಾಗಿದೆ. ಆದ್ಯತೆ ಮೇರೆಗೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ
ಆರಗ ಜ್ಞಾನೇಂದ್ರ ಮಧ್ಯಪ್ರವೇಶಿಸಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಮೇಲೆ ಆನೆಗಳು ದಾಳಿ ಮಾಡಿ ಒಂದು ಗಂಟೇಯಲ್ಲೇ ನಾಶ ಮಾಡುತ್ತಿವೆ ಎಂದರು. ಶಾಸಕ ಎಚ್.ಡಿ.ತಮ್ಮಯ್ಯ, ಹರೀಶ್ ಪೂಂಜ್ಯಾ, ಭಾಗಿರಥಿ ಮೂರಳ್ಯ ಸೇರಿದಂತೆ ಹಲವು ಸೇರಿದಂತೆ ಸಾಕಷ್ಟು ಶಾಸಕರು ವನ್ಯಜೀವಿಗಳ ಸಂಘರ್ಷದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಚರ್ಚೆ ತೀವ್ರವಾದಾಗ ಸಭಾಧ್ಯಕ್ಷರು, ಅಲ್ಲಿ ಆನೆ ಕಾಟ, ಇಲ್ಲಿ ನಿಮ್ಮ ಕಾಟ ಎಂದರು. ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಆನೆ-ಮಾನವ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ಬ್ಯಾರಿಕೇಡ್ ನಿರ್ಮಿಸುವುದರಿಂದ ಸಮಸ್ಯೆ ಬಗೆಹರಿಸಬಹುದು. ಶೃಂಗೇರಿ ಕ್ಷೇತ್ರದಲ್ಲಿ 7.51 ಕಿ.ಮೀ ಉದ್ದಕ್ಕೆ ಬ್ಯಾರಿಕೇಡ್ ನಿರ್ಮಿಸಬೇಕೆಂಬ ಪ್ರಸ್ತಾವನೆ ಕಲ್ಪಿಸಬೇಕು. ಈಗಾಗಲೇ 5 ಕೋಟಿರೂ.ಗಳನ್ನು ಖರ್ಚು ಮಾಡಿ 4 ಕಿ.ಮೀ ಹೆಚ್ಚಿನ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಅನುದಾನ ಆಧರಿಸಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯಾದ್ಯಂತ 6395 ಆನೆಗಳಿವೆ. ಆನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ತಡೆಯಲು 200 ಕೋಟಿ ರೂ. ವೆಚ್ಚದಲ್ಲಿ 120 ಕಿ.ಮೀ ಬ್ಯಾರಿಕೇಡ್‍ನ್ನು ರಾಜ್ಯಾದ್ಯಂತ ನಿರ್ಮಿಸಲಾಗುತ್ತಿದೆ. ಏಳು ವಿಶೇಷ ಕಾರ್ಯಪಡೆಗಳು ಕೆಲಸ ನಿರ್ವಹಿಸುತ್ತಿದ್ದು, ಅಗತ್ಯವಾದರೆ ಮತ್ತಷ್ಟು ಹೆಚ್ಚುವರಿ ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.