Thursday, April 30, 2026
Homeರಾಜ್ಯಶೇ.99.35 ರಷ್ಟು ಅರ್ಜಿಗಳಿಗೆ ಸಕಾಲಿಕ ಸೇವೆ : ಕೃಷ್ಣ ಭೈರೇಗೌಡ

ಶೇ.99.35 ರಷ್ಟು ಅರ್ಜಿಗಳಿಗೆ ಸಕಾಲಿಕ ಸೇವೆ : ಕೃಷ್ಣ ಭೈರೇಗೌಡ

Timely service for 99.35% of applications: Krishna Bhairegowda

ಬೆಂಗಳೂರು,ಮಾ.18- ಸಕಾಲ ಯೋಜನೆ ಅಡಿಯಲ್ಲಿ ಪ್ರಸ್ತುತ ವರ್ಷ ಶೇ.99.35 ರಷ್ಟು ಅರ್ಜಿಗಳಿಗೆ ನಿಗದಿತ ಕಾಲ ಮಿತಿಯೊಳಗೆ ಸೇವೆ ಒದಗಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಸದಸ್ಯ ಕೆ.ಅಬ್ದುಲ್‌ ಜಬ್ಬರ್‌ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾಡ ಕಚೇರಿ ಹಾಗೂ ತಹಶೀಲ್ದಾರ್‌ ಕಚೇರಿಗಳಲ್ಲಿ ಜನರಿಗೆ ಎಲ್ಲಾ ಸೇವೆಗಳೂ ತ್ವರಿತವಾಗಿ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಪರಿಣಾಮ ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಸಕಾಲ ಯೋಜನೆಯ ಅಡಿಯಲ್ಲಿ ಲಭ್ಯವಾಗುವ ಎಲ್ಲಾ ಸೇವೆಗಳನ್ನೂ ನಿಗದಿತ ಅವಧಿಯಲ್ಲಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ವಿವಿಧ ಸೇವೆಗಳಿಗಾಗಿ ನಾಡ ಕಚೇರಿಗೆ ಸುಮಾರು 1.6 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 98 ಲಕ್ಷ ಅರ್ಜಿಗಳಿಗೆ ಸಕಾಲದಲ್ಲಿ ಸೇವೆ ನೀಡಲಾಗಿದೆ. ಅಂದರೆ ಶೇ.98.92 ರಷ್ಟು ಅರ್ಜಿಗಳಿಗೆ ಸಕಾಲದಲ್ಲಿ ಸೇವೆ ನೀಡಲಾಗಿದ್ದು, ಶೇ.1.1 ರಷ್ಟು ಅರ್ಜಿಗಳಿಗೆ ಮಾತ್ರ ಸಕಾಲ ಮಿತಿಗಿಂತ ವಿಳಂಬವಾಗಿದೆ. ಇನ್ನು ಪ್ರಸ್ತುತ ವರ್ಷ 99.35 ರಷ್ಟು ಅರ್ಜಿಗಳಿಗೆ ಸಕಾಲ ಮಿತಿಯಲ್ಲಿ ದಾಖಲೆ ನೀಡಿದ್ದೇವೆ ಎಂದು ವಿವರಿಸಿದರು.

ಶ್ರೀಸಾಮಾನ್ಯರು ನಮ ಕಚೇರಿಗೆ ಆಗಮಿಸಿದರೆ ಮಾತ್ರ ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬ ಕಾರಣಕ್ಕಾಗಿ ಅವರು ಮನೆಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಾತಿ-ಆದಾಯ, ನಿವಾಸಿ ದೃಢೀಕರಣ ಪ್ರಮಾಣ ಪತ್ರಗಳಿಗಾಗಿ ಅವರು ಮನೆಯಿಂದಲೇ ಮೊಬೈಲ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅಲ್ಲದೆ, ಅವರ ಅರ್ಜಿ ಪ್ರತಿಯೊಂದು ಹಂತ ದಾಟುವಾಗಲೂ ಅದರ ಮಾಹಿತಿಯನ್ನು ಮೆಸೇಜ್‌ ಮೂಲಕ ಅವರ ಮೊಬೈಲ್‌ಗೆ ತಲುಪಿಸುವ ವ್ಯವಸ್ಥೆ ಇದೆ. ಕೊನೆಗೆ ಜನ ಮನೆಯಲ್ಲೇ ಕುಳಿತು ಅವರ ಕೋರಿಕೆಯ ಪ್ರಮಾಣ ಪತ್ರಗಳನ್ನು ಪ್ರಿಂಟ್‌ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ಈ ವಿಧಾನವನ್ನು ಮತ್ತಷ್ಟು ಸರಳೀಕರಿಸುವ ಸಲುವಾಗಿ, ಜನ ಸಾಮಾನ್ಯರಿಗೆ ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ಸ್ವಯಂ ಚಾಲಿತವಾಗಿ ನೀಡುವ ಸಲುವಾಗಿ ಕಳೆದ ಒಂದು ವರ್ಷದಿಂದ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಕುಟುಂಬ ಡೇಟಾಬೇಸ್‌‍ನಲ್ಲಿ ಮನೆ ವಿಳಾಸ ಜಾತಿ ಆದಾಯದ ಮಾಹಿತಿ ಇರುತ್ತದೆ. ಅಲ್ಲಿಂದ ಡೇಟಾಗಳನ್ನು ಸ್ವೀಕರಿಸಿ ಸ್ವಯಂ ಚಾಲಿತವಾಗಿ ಪ್ರಮಾಣ ಪತ್ರ ನೀಡುವ ಸಂಬಂಧ ಪ್ರಯತ್ನ ನಡೆಯುತ್ತಿದೆ. ಒಂದು ವರ್ಷದಿಂದ ಈ ತಂತ್ರಾಂಶದ ವಿನ್ಯಾಸ ನಡೆಯುತ್ತಿದ್ದು, ಇನ್ನಷ್ಟು ಸರಳೀಕರಣ ಆಗುತ್ತದೆ ಎಂದು ಭರವಸೆ ನೀಡಿದರು.

RELATED ARTICLES

Latest News