ಬೆಂಗಳೂರು, ಡಿ.15- ನಗರದಲ್ಲಿ ಇತ್ತೀಚೆಗೆ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದು, ಇದನ್ನು ನಿಗ್ರಹಿಸಲು ಪೊಲೀಸರು ಶ್ರಮವಹಿಸುತ್ತಿದ್ದಾರೆ. ಖದೀಮರು ರಸ್ತೆಯಲ್ಲಿ, ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ದೋಚುವ ಹಣಕ್ಕಿಂತ ಹತ್ತು ಪಟ್ಟು ಹೆಚ್ಚು ಹಣವನ್ನು ಸೈಬರ್ ಕಳ್ಳರು ಕೊಳ್ಳೆ ಹೊಡೆಯುತ್ತಿದ್ದಾರೆ.
ಈ ನಡುವೆ, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಎಸಗಿದ ಪ್ರಕರಣಗಳು ಬೆಳಕಿಗೆ ಬಂದಿದ್ದು, 15 ದಿನಗಳ ಅಂತರದಲ್ಲಿ 7 ಜನರಿಗೆ 3 ಕೋಟಿ ವಂಚಿಸಲಾಗಿದ್ದು, ಈ ಬಗ್ಗೆ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಸೈಬರ್ ಅಪರಾಧಿಗಳು ಪೊಲೀಸರು ಅಥವಾ ತನಿಖಾ ಸಂಸ್ಥೆ ಹೆಸರು ಹೇಳಿಕೊಂಡು ಅಮಾಯಕ ಸಾರ್ವಜನಿಕರಿಗೆ ಕರೆ ಮಾಡಿ ವಂಚಿಸುತ್ತಿದ್ದಾರೆ.
ನಿಮ್ಮ ಮನೆಗೆ ಪಾರ್ಸಲ್ ಬಂದಿದೆ ಎಂದು ಹೇಳುವ ಸೈಬರ್ ವಂಚಕರು, ಪೆಡೆಕ್ಸ್ ಅಥವಾ ಬೇರೆ ಕಂಪನಿ ಕೊರಿಯರ್ನಲ್ಲಿ ಪಾರ್ಸಲ್ ಬಂದಿದೆ. ನಿಮ್ಮ ದಾಖಲಾತಿಗಳು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದೆ ಎಂದು ಹೇಳಿ ಭಯ ಹುಟ್ಟಿಸುತ್ತಾರೆ. ಬಳಿಕ ಸ್ಕೈಪ್ ಲಿಂಕ್ ನೀಡಿ ಲಾಗ್ಇನ್ ಆಗುವಂತೆ ತಿಳಿಸುವ ವಂಚಕರು, ನಂತರ ಪೊಲೀಸ್ ಸಮವಸದಲ್ಲೇ ಸಂಭಾಷಣೆ ನಡೆಸುತ್ತಾರೆ. ನೀವು ವಿಚಾರಣೆಗೆ ಹಾಜರಾಗಬೇಕೆಂದು ಬೆದರಿಕೆ ಹಾಕುತ್ತಾರೆ. ವಿಚಾರಣೆಗೆ ವಿನಾಯಿತಿ ಬೇಕಾದರೆ ಹಣ ಹಾಕಿ, ಇಲ್ಲದಿದ್ದರೆ ಬಂಧಿಸುತ್ತೇವೆ ಎಂದು ಬೆದರಿಸುತ್ತಾರೆ.
ಬಳಿಕ ಗಂಟೆಗಳ ಕಾಲ ಸ್ಕೈಪ್ ಬಿಟ್ಟು ಬೇರೆ ಕಡೆ ಹೋಗಲು ಬಿಡುವುದಿಲ್ಲ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಇಲ್ಲೇ ಇರಬೇಕೆಂದು ಬೆದರಿಕೆ ಹಾಕಲಾಗುತ್ತದೆ. ಇದೇ ರೀತಿ ಹೆಚ್ಎಸ್ಆರ್ ಲೇಔಟ್ ಮೂಲದ ವೃದ್ಧ ದಂಪತಿಗೆ 1 ಕೋಟಿ 97 ಲಕ್ಷ ರೂ. ವಂಚನೆ ಎಸಗಿದ್ದಾರೆ. ಇದೇ ರೀತಿ 15 ದಿನಗಳ ಅಂತರದಲ್ಲಿ ಏಳು ಮಂದಿಗೆ 3 ಕೋಟಿ ವಂಚಿಸಲಾಗಿದೆ. ಆದರೆ, ಸೈಬರ್ ಖದೀಮರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಸದ್ಯ, ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.