ಬೆಂಗಳೂರು,ಡಿ.16- ರಾಜ್ಯದ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2022-23 ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳ ಮೂಲಕ 28,86,548 ರೈತರು, 21,324.05 ಕೋಟಿ ರೂ. ಮೊತ್ತದ ಬೆಳೆಸಾಲ ಪಡೆದಿದ್ದಾರೆ. ಅವರಲ್ಲಿ ನವೆಂಬರ್ 30 ರವರೆಗೆ 18,64,042 ರೈತರು 12,484.18 ಕೋಟಿ ರೂ.ಗಳನ್ನು ಮರುಪಾವತಿಸಿದ್ದಾರೆ. ಈ ಅವಯಲ್ಲಿ ಗಡುವು ಬರುವ ಸಾಲಗಳಿಗೆ 47,733 ರೈತರು 320 ಕೋಟಿ ರೂ.ಗಳನ್ನು ಪಾವತಿಸದೆ ಸುಸ್ತಿದಾರರಾಗಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕುಗಳಿಂದ 5,47,777 ರೈತರು 9,761.85 ಕೋಟಿ ರೂ.ಗಳ ಬೆಳೆ ಸಾಲ ಪಡೆದುಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಸಾಲದ ಮೊತ್ತದಲ್ಲಿ ಮರುಪಾವತಿ ಮಾಹಿತಿ ಲಭ್ಯವಿಲ್ಲ ಎಂದು ರಾಜ್ಯಮಟ್ಟದ ಬ್ಯಾಂಕರ್‍ಗಳ ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.
ಬರಗಾಲದ ಹಿನ್ನೆಲೆಯಲ್ಲಿ ಸಾಲಮನ್ನಾ ಮಾಡಬೇಕು ಎಂಬ ವಿಪಕ್ಷಗಳ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ವಿಧಾನಮಂಡಲದ ಚರ್ಚೆಯಲ್ಲಿ ನೇರವಾಗಿ ಉತ್ತರಿಸದೆ ಅಸಮ್ಮತಿ ತೋರಿಸಿದ್ದಾರೆ. ಆದರೆ ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆಸಾಲದ ಅಸಲನ್ನು ಪಾವತಿಸಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದಾರೆ.
ಸಹಕಾರ ಸಚಿವ ರಾಜಣ್ಣ ನೀಡಿರುವ ಮಾಹಿತಿ ಪ್ರಕಾರ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದವರ ಪೈಕಿ 10,22,506 ರೈತರು ಇನ್ನೂ 8,374.86 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಬರದ ಹಿನ್ನೆಲೆಯಲ್ಲಿ ಸಾಲಮರುಪಾವತಿ ಕಷ್ಟಸಾಧ್ಯ ಎಂಬ ಕಾರಣಕ್ಕಾಗಿಯೇ ಮನ್ನಾ ಮಾಡುವ ಬೇಡಿಕೆಗಳು ಕೇಳಿಬಂದಿದ್ದವು. ಆದರೆ ಸರ್ಕಾರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಿದೆ.
ಮಧ್ಯಪ್ರದೇಶ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಕುಮಾರ್ ಸಿಂಗ್ ನೇಮಕ
ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳ 48.24 ಲಕ್ಷ ಸದಸ್ಯರು ನೋಂದಣಿ
ಬೆಂಗಳೂರು,ಡಿ.16- ರಾಜ್ಯದಲ್ಲಿ ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳ 48.24 ಲಕ್ಷ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಗ್ರಾಮೀಣ ಭಾಗದಲ್ಲಿ 44,35,202 ಸದಸ್ಯರು ನೋಂದಣಿಯಾಗಿದ್ದು, 12,14,472 ಮಂದಿಗೆ ಕಾರ್ಡ್ ವಿತರಿಸಲಾಗಿದೆ. ನಗರ ಪ್ರದೇಶದಲ್ಲಿ 3,89,467 ಸದಸ್ಯರು ನೋಂದಣಿಯಾಗಿದ್ದು, 1,15,193 ಮಂದಿಗೆ ಕಾರ್ಡ್ ವಿತರಿಸಲಾಗಿದೆ.
ಒಟ್ಟಾರೆ ಯಶಸ್ವಿನಿ ಕಾರ್ಡ್ ವಿತರಣೆಯ ಪ್ರಮಾಣ ಶೇ.27 ರಷ್ಟಾಗಿದ್ದು, 13,21,665 ಮಂದಿಗೆ ಮಾತ್ರ ಕಾರ್ಡ್‍ಗಳನ್ನು ತಲುಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದೊಂದಿಗೆ ಯೋಜನೆಯ ಶಿಬಿರಗಳನ್ನು ಆಯೋಜಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯಾಧ್ಯಕ್ಷರ ಸಭೆ ನಡೆಸಿ ಹೆಚ್ಚಿನ ಸದಸ್ಯರನ್ನು ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.