ಬೆಂಗಳೂರು, ಮಾ.21- ಈ ಹಿಂದೆ ಇಡೀ ವಿಶ್ವವನ್ನೇ ಬಿಟ್ಟು ಬಿಡದಂತೆ ಕಾಡಿ ಆರ್ಥಿಕ ಚಟುವಟಿಕೆಯನ್ನೇ ಬುಡುಮೇಲು ಮಾಡಿದ್ದ ಲಾಕ್‌ಡೌನ್ ಪೆಡಂಭೂತ ಮತ್ತೆ ದೇಶದಲ್ಲಿ ಕಾಡಲಿದೆಯೇ…?! ಏಕೆಂದರೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಹಾಗೂ ಇರಾನ್‌ನಡುವೆ ನಡೆಯುತ್ತಿರುವ ಭೀಕರ ಸಮರದಿಂದಾಗಿ ದೇಶದೆಲ್ಲೆಡೆ ತೈಲ ಪೂರೈಕೆಯಲ್ಲಿ ದಿನದಿಂದ ದಿನಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೈಲ ಪೂರೈಕೆ ಮಾಡುವ ಕಂಪನಿಗಳಾದ ಐಒಸಿ, ಬಿಪಿಸಿ ಮತ್ತು ಹೆಚ್‌ಪಿಸಿ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ವರ್ಕ್ ಫ್ರಂ ಹೋಮ್ ನೀತಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಗ್ರಾಹಕರ ಬೇಡಿಕೆಗೆ ತಕ್ಕಂತೆ ತೈಲ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಗಲ್ಫ್ ರಾಷ್ಟ್ರಗಳಿಂದ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ವಿತರಣೆಯಲ್ಲಿ ಅಭಾವ ಉಂಟಾಗಿದೆ.
ಹೀಗಾಗಿ ದ್ವಿಚಕ್ರ, ತ್ರಿಚಕ್ರ ಹಾಗೂ ಇತರೆ ವಾಹನಗಳ ಬಳಕೆಗೆ ಕಡಿವಾಣ ಹಾಕುವಂತೆ ಸರ್ಕಾರಿ ಸೌಮ್ಯದ ತೈಲ ಕಂಪನಿಗಳು ಕೇಂದ್ರ ಪೆಟ್ರೋಲಿಯಂ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.ವಾರದಲ್ಲಿ ಮೂರು ದಿನ ಕಚೇರಿ ಹಾಗೂ ಉಳಿದ ಮೂರು ದಿನಗಳಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಬೇಕು. ಭಾನುವಾರ ರಜಾ ದಿನ ವಾಗಿರುವುದರಿಂದ ಸಮಸ್ಯೆ ಉದ್ಭವಿಸುವುದಿಲ್ಲ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾದ ಚಿಂತನೆಯನ್ನು ನಡೆಸಬೇಕೆಂದು ಕೋರಲಾಗಿದೆ.
ಈ ಹಿಂದೆ ಕೋವಿಡ್-19ರ ಸಂದರ್ಭದಲ್ಲಿ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಕೇಂದ್ರ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿತ್ತು. ಆ ವೇಳೆ ಖಾಸಗಿ ಮತ್ತು ಸರ್ಕಾರಿ ಕಚೇರಿಗಳ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ವರ್ಕ್ ಫ್ರಂ ಹೋಮ್ ನೀತಿಯನ್ನು ಜಾರಿಗೊಳಿಸಿತ್ತು.
ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ವಿಧಿ ಇಲ್ಲದೇ ನಾವು ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯ ಪ್ರಮಾಣವನ್ನು ನಿಗದಿ ಮಾಡಬೇಕಾಗುತ್ತದೆ ಎಂದು ತೈಲ ಕಂಪನಿಗಳು ಅಸಹಾಯಕತೆ ವ್ಯಕ್ತಪಡಿಸಿವೆ.
ಅಂದರೆ ಬಂಕ್‌ಗಳಲ್ಲಿ ಗ್ರಾಹಕರಿಗೆ ಪ್ರತಿದಿನ ಹೆಚ್ಚೆಂದರೆ ದ್ವಿಚಕ್ರ ವಾಹನಗಳಿಗೆ 1 ಲೀಟರ್ ಪೆಟ್ರೋಲ್ ಮತ್ತು ಸರಕು ಸಾಗಾಣಿಕೆಯ ವಾಹನಗಳಿಗೆ ಅಗತ್ಯವಿರುವಷ್ಟು ಡೀಸೆಲ್ ಪೂರೈಕೆ ಮಾಡಬೇಕಾಗುತ್ತದೆ ಎಂದು ಕಂಪನಿಗಳು ಹೇಳಿವೆ.
ಪೆಟ್ರೋಲ್ ಉಳಿಸುವುದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುವುದು (ವರ್ಕ್ ಫ್ರಂ ಹೋಂ), ಇಂಧನ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹೆದ್ದಾರಿಗಳಲ್ಲಿ ವಾಹನಗಳ ವೇಗ ಮಿತಿಯನ್ನು ಕನಿಷ್ಠ 10 ಕಿಲೋಮೀಟರ್‌ನಷ್ಟು ಕಡಿತಗೊಳಿಸಲು ಸಂಸ್ಥೆ ಸಲಹೆ ನೀಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲು, ಹಾಗೂ ದೊಡ್ಡ ನಗರಗಳಲ್ಲಿ ಸಮ-ಬೆಸ ಮಾದರಿಯಲ್ಲಿ ಕಾರುಗಳ ಸಂಚಾರವನ್ನು ನಿರ್ಬಂಧಿಸಲು ಐಇಎ ಶಿಫಾರಸು ಮಾಡಿದೆ. ಕಾರುಗಳಲ್ಲಿ ಪ್ರಯಾಣಿಸುವಾಗ ಶೇರಿಂಗ್ ಮೂಲಕ ಪ್ರಯಾಣ ಹೆಚ್ಚಿಸುವಂತೆ ಪ್ರೇರೇಪಿಸಲಾಗಿದೆ.
ಎಲ್‌ಪಿಜಿ ಬಳಕೆಗೆ ಸಂಬಂಧಿಸಿದಂತೆ ಅಡುಗೆಯಂತಹ ಅಗತ್ಯಗಳಿಗೆ ಮಾತ್ರ ಎಲ್‌ಪಿಜಿಯನ್ನು ಬಳಸಬೇಕು. ಸಾರಿಗೆ ಮತ್ತು ಇತರ ಕೆಲಸಗಳಿಗೆ ಎಲ್‌ಪಿಜಿ ಬಳಕೆ ಬೇಡ ಎಂದು ಹೇಳಲಾಗಿದೆ.ವಿಮಾನ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಮತ್ತು ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕರೆಂಟ್ ಸ್ಟವ್ ಹಾಗೂ ಪರ್ಯಾಯ ಆಯ್ಕೆಗಳನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ.
ಕೈಗಾರಿಕೆಗಳಲ್ಲಿ ಎಲ್‌ಪಿಜಿ ಬದಲಿಗೆ ನೈಸರ್ಗಿಕ ಅನಿಲ, ಬ್ಯೂಟೇನ್, ಪ್ರೋಪೇನ್, ಇಥೇನ್ ಮುಂತಾದ ಅನಿಲಗಳನ್ನು ಬಳಸಲು ಐಇಎ ಸಲಹೆ ನೀಡಿದೆ.
ಬಂಕ್‌ಗಳು ಖಾಲಿ ಖಾಲಿ :
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಇಂಧನ ಕೊರತೆ ಭೀತಿ ಮೂಡಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನ ಮುಗಿಬಿದ್ದಿದ್ದಾರೆ.
ರಿಪ್ಪನ್‌ಪೇಟೆಯಲ್ಲಿ ಒಟ್ಟು 4 ಪೆಟ್ರೋಲ್ ಬಂಕ್‌ಗಳಿವೆ. ಮೂರು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಖಾಲಿಯಾದ ಹಿನ್ನೆಲೆ ಶಿವಮೊಗ್ಗ ರಸ್ತೆಯ ಹೆಚ್‌ಪಿ ಬಂಕ್‌ನಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತು ಇಂಧನ ಪಡೆಯುತ್ತಿದ್ದಾರೆ.
ರಾಜ್ಯದ ಅನೇಕ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ದಿನದಿಂದ ದಿನಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಪ್ರತಿದಿನ ಒಂದು ಬಂಕ್‌ಗೆ ಸಾಮಾನ್ಯವಾಗಿ 30 ಸಾವಿರ ಲೀಟರ್ ಡೀಸೆಲ್ ಹಾಗೂ 20 ಸಾವಿರ ಲೀಟರ್ ಪೆಟ್ರೋಲ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅರ್ಧ ಪ್ರಮಾಣಕ್ಕೆ ಇಳಿದಿದೆ ಎನ್ನುತ್ತಾರೆ ಪೆಟ್ರೋಲ್ ಬಂಕ್‌ಗಳ ಮಾಲೀಕರು.
