ಬೆಂಗಳೂರು,ಡಿ.16- ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗಿರುವ ಮಾಹಿತಿ ಇದ್ದರೂ ರಾಜ್ಯದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ನಗರದ ಮಾಗಡಿ ರಸ್ತೆಯ ಆರೋಗ್ಯ ಸೌಧದ ಬಳಿ ಸಿಎಸ್ಆರ್ ಯೋಜನೆಯಡಿ ಸಮುದಾಯ ಆರೋಗ್ಯ ಸೇವೆ ಒದಗಿಸುವ ವೆಲ್ನೆಸ್ ಆನ್ ವೀಲ್ಸ್ ವಾಹನಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಕೋವಿಡ್ ಸೋಂಕು ಯಾವ ರೀತಿ ಜನರ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ರಾಜ್ಯದಲ್ಲಿ ಆತಂಕಪಡುವಂತಹ ಬೆಳವಣಿಗೆ ಏನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಚಳಿಯ ವಾತಾವರಣದಿಂದಾಗಿ ವೈರಲ್ ಇನ್ಫ್ಲುಯೆಂಜ ಹಾಗೂ ಕೋವಿಡ್ ಸೋಂಕು ಕಂಡುಬರುತ್ತಿದೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಶಿಷ್ಟಾಚಾರ ಪಾಲನೆ ಮಾಡಬೇಕಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಎಲ್ಲವನ್ನು ಗಮನಿಸಲಾಗುತ್ತಿದೆ.
ಒಂದು ವೇಳೆ ಆತಂಕಪಡುವ ಸ್ಥಿತಿ ಬಂದಾಗ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ ಭಯ ಸೃಷ್ಟಿಸುವ ವಾತಾವರಣವಿಲ್ಲ. ಸೋಂಕು ಪೀಡಿತ ಪ್ರದೇಶದಿಂದ ಬರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದರು. ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕೇರಳದಲ್ಲಿ ಯಾವ ರೀತಿಯ ಸೋಂಕು ಹೆಚ್ಚಾಗಿದೆ ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲಾಗುವುದು ಎಂದರು.
ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಹೆಸರಿಡಿ : ಯತ್ನಾಳ್
ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಗುವುದು. ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಭ್ರೂಣಹತ್ಯೆ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಹೊಸಕೋಟೆಯಲ್ಲಿ ನಮ್ಮ ವೈದ್ಯರೇ ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲ ಕಡೆಯೂ ಆಗಬೇಕು. ಹೆಣ್ಣು ಮಗುವಿನ ಬಗ್ಗೆ ಅಸಡ್ಡೆ ಬೇಡ ಪ್ರೀತಿ ಇರಬೇಕು. ತಪ್ಪು ಎಸಗಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆಯಿಂದಲೂ ಈ ಬಗ್ಗೆ ಕಾರ್ಯಾಚರಣೆ ಹೆಚ್ಚು ಮಾಡಲಾಗುವುದು ಎಂದು ಹೇಳಿದರು.
ವೋಲ್ವೋ ಗ್ರೂಪ್ ಮತ್ತು ನಾರಾಯಣ ಹೆಲ್ತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ವೆಲ್ನೆಸ್ ಆನ್ ವೀಲ್ಸ್ನ್ನು ಪ್ರಾರಂಭಿಸಲಾಗಿದೆ. ಇದು ಕ್ಯಾನ್ಸರ್, ಹೃದಯ ಮತ್ತು ರೋಗ ನಿರ್ಣಯ ಸೇವೆಗಳಿಗೆ ಉಚಿತ ಸ್ಕ್ರೀನಿಂಗ್ ಗಳಿಗೆ ಮೀಸಲಾಗಿರುವ ಸುಧಾರಿತ ಸಂಚಾರಿ ಕ್ಲಿನಿಕ್ ಆಗಿದೆ. ಇಂದಿನಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ.