Saturday, July 27, 2024
Homeರಾಜ್ಯಸಂಸದ ಪ್ರತಾಪ್ ಸಿಂಹಗೆ ಕಾನೂನು ಸಂಕಷ್ಟ..!

ಸಂಸದ ಪ್ರತಾಪ್ ಸಿಂಹಗೆ ಕಾನೂನು ಸಂಕಷ್ಟ..!

ಬೆಂಗಳೂರು,ಡಿ.16-ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೊಸ ಸಂಸತ್ ಭವನದ ಮೇಲೆ ನಡೆದ ಭದ್ರತಾ ಲೋಪ ಕುರಿತಾಗಿ ಬಿಜೆಪಿಯ ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ವಿಶೇಷ ಘಟಕದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪ್ರತಾಪ್ ಸಿಂಹ ಅವರಿಗೆ ನೋಟಿಸ್ ನೀಡಲು ಮುಂದಾಗಿದೆ. ಮುಂದಿನ ವಾರ ನೋಟಿಸ್ ನೀಡುವ ಸಂಭವ ಹೆಚ್ಚಾಗಿದ್ದು, ಪ್ರಕರಣ ಕುರಿತಂತೆ ದೆಹಲಿ ವಿಶೇಷ ಘಟಕದ ಅಪರಾಧ ವಿಭಾಗದ ಹಿರಿಯ ನೇತೃತ್ವದ ಪೊಲೀಸ್ ತಂಡ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.

ಸಂಸತ್ ಒಳಗೆ ಪ್ರವೇಶಿಸಿದ್ದ ಇಬ್ಬರಲ್ಲಿ ಒಬ್ಬಾತ ಉತ್ತರಪ್ರದೇಶದ ಲಖ್ನೋ ನಿವಾಸಿಯಾಗಿದ್ದರೆ, ಮತ್ತೋರ್ವ ಮೈಸೂರಿನ ಮನೋರಂಜನ್. ಈ ಇಬ್ಬರಿಗೂ ಪ್ರತಾಪ್ ಸಿಂಹ ಅವರ ಆಪ್ತ ಕಾರ್ಯದರ್ಶಿ ಸಂಸತ್ ಭವನದೊಳಗೆ ಪ್ರವೇಶ ಪಡೆಯಲು ತಮ್ಮ ಅನುಮತಿಯುಳ್ಳ ಪಾಸ್ ನೀಡಿದ್ದರು.

34 ವರ್ಷದ ಮನೋರಂಜನ್ ಮೈಸೂರಿನ ವಿಜಯನಗರದ 2ನೇ ಹಂತದ ನಿವಾಸಿಯಾಗಿರುವ ದೇವರಾಜ ಗೌಡರ ಪುತ್ರ. ಬೆಂಗಳೂರಿನ ಬಿಐಟಿ ಕಾಲೇಜಿನಿಂದ ಬಿಇ ಪದವಿ ಪಡೆದುಕೊಂಡಿದ್ದ. ಸಂಸತ್ ಹೊರಗೆ ದಾಂಧಲೆ ಎಬ್ಬಿಸಿದ ಹರಿಯಾಣದ ಹಿರ್ಷದ ನಿವಾಸಿ ನೀಲಂ, ಮತ್ತೋರ್ವ ಮಹಾರಾಷ್ಟ್ರದ ಲಾಥೂರ್ನ ಅಮೂಲ್ ಸಿಂಧೆ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳು ಪ್ರತಾಪ್ ಸಿಂಹ ಅವರ ಸಹಿವುಳ್ಳ ಪತ್ರದಲ್ಲೇ ಪಾಸ್ ಪಡೆದುಕೊಂಡಿರುವುದರಿಂದ ಇದನ್ನು ಭದ್ರತಾ ವೈಫಲ್ಯವೆಂದೇ ಪರಿಗಣಿಸಲಾಗಿದ್ದು, ಎಲ್ಲ ಆಯಾಮಗಳಿಂದಲೂ ಸಂಸದರನ್ನು ತನಿಖೆಗೆ ಒಳಪಡಿಸಲು ದೆಹಲಿ ವಿಶೇಷ ಘಟಕದ ಪೊಲೀಸರು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಖುದ್ದು ನರೇಂದ್ರಮೋದಿ ಹಲವಾರು ಬಾರಿ ತಮ್ಮ ಭಾಷಣಗಳಲ್ಲಿ ಹೇಳಿರುವುದರಿಂದ ತಮ್ಮ ಪಕ್ಷದವರೇ ಸಂಸತ್ ಸದಸ್ಯರಾಗಿದ್ದರೂ ವಿಚಾರಣೆಯಿಂದ ವಿನಾಯ್ತಿ ನೀಡಬಾರದೆಂದು ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈಗ ಬಂಧಿತರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಇಬ್ಬರಿಗೂ ಯಾವ ಕಾರಣದಿಂದ ಪಾಸ್ಗಳನ್ನು ನೀಡಲಾಗಿತ್ತು. ಎಷ್ಟು ವರ್ಷದಿಂದ ಇವರು ಪರಿಚಿತರು, ಇವರ ಹಿನ್ನಲೆ , ಆರೋಪಿಗಳಿಗೂ ಮತ್ತು ಸಂಸದರಿಗಿರುವ ಸಂಬಂಧ ಇದೆಲ್ಲವನ್ನೂ ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಲಿದೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೋಡಿಶ್ರೀಗಳಿಗೆ ಆಹ್ವಾನ

ಒಂದು ವೇಳೆ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸದಿದ್ದರೆ ಕೇಂದ್ರ ಸರ್ಕಾರ ತಮ್ಮ ಭದ್ರತಾ ವೈಫಲ್ಯವನ್ನು ಮುಚ್ಚಿ ಹಾಕಲು ಇಡೀ ಪ್ರಕರಣವನ್ನೇ ತಿಪ್ಪೆ ಸಾರಿಸಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಬಹುದು.ಈಗಾಗಲೇ ಎಎಪಿ, ಟಿಎಂಸಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸಬೇಕು ಹಾಗೂ ಅವರ ವಿರುದ್ಧವೂ ಬಂಧಿತ ಆರೋಪಿಗಳ ಮೇಲೆ ದಾಖಲಾಗಿರುವ ಪ್ರಕರಣವನ್ನೇ ದಾಖಲಿಸಬೇಕೆಂದು ಒತ್ತಡ ಹಾಕಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಪ್ರಕರಣವು ಅಸ್ತ್ರವಾಗದಂತೆ ಬಿಜೆಪಿ ಜಾಗೃತ ಹೆಜ್ಜೆ ಇಡುತ್ತಿದ್ದು, ಪ್ರಕರಣದಲ್ಲಿ ಯಾರಿಗೂ ವಿನಾಯ್ತಿ ಬೇಡ ಎಂಬ ದೃಢ ನಿರ್ಧಾರಕ್ಕೆ ಬಂದಂತಿದೆ.

RELATED ARTICLES

Latest News