Wednesday, May 1, 2024
Homeರಾಜ್ಯಕಾಂಗ್ರೆಸ್‌ನಲ್ಲಿ ಅಹಿಂದಾ ಫೈಟ್, ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಸಿದ್ದು-ಹರಿಪ್ರಸಾದ್

ಕಾಂಗ್ರೆಸ್‌ನಲ್ಲಿ ಅಹಿಂದಾ ಫೈಟ್, ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಸಿದ್ದು-ಹರಿಪ್ರಸಾದ್

ಬೆಂಗಳೂರು,ಡಿ.16- ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳ ನಾಯಕನ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿಯಲ್ಲಿ ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಸಿ ಸುಮಾರು ಹತ್ತು ಲಕ್ಷ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಕೂಡ ಜನವರಿ ತಿಂಗಳಿನಲ್ಲೇ ಸಮಾವೇಶ ನಡೆಸುವ ಪ್ರಯತ್ನದಲ್ಲಿದ್ದಾರೆ.

ಇತ್ತೀಚೆಗೆ ನಡೆದ ಆರ್ಯ ಈಡಿಗರ ಸಮಾವೇಶದಲ್ಲಿ ಹರಿಪ್ರಸಾದ್ ಅವರನ್ನು ಕಡೆಗಣಿಸಲಾಗಿತ್ತು. ಇದಕ್ಕೆ ಸೆಡ್ಡು ಹೊಡೆಯಲು ಬಿ.ಕೆ.ಹರಿಪ್ರಸಾದ್ ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಿದ್ದರು. ಅದಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ಅವರ ಟೀಂ ಜನವರಿಯಲ್ಲೇ ಸಮಾವೇಶಕ್ಕೆ ಸಜ್ಜುಗೊಳ್ಳುತ್ತಿದೆ.

ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ಕಾಲಕಾಲಕ್ಕೆ ಬೃಹತ್ ಸಮಾವೇಶಗಳ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿ ರಾಜಕೀಯ ಎದುರಾಳಿಗಳನ್ನು ಬಗ್ಗುಬಡಿದಿರುವುದು ಮೊದಲಿನಿಂದಲೂ ಕಂಡುಬರುತ್ತಿದೆ. ಅಹಿಂದ ಸಮಾವೇಶ, ಸಿದ್ದರಾಮೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಸಿದ್ದರಾಮಯ್ಯ ಅವರ ಬಲವರ್ಧನೆಗೆ ಕಾರಣವಾಗಿವೆ. ಲೋಕಸಭೆ ಚುನಾವಣೆಯ ನಂತರ ರಾಜಕೀಯ ವಿಪ್ಲವಗಳ ಮುನ್ಸೂಚನೆಯಿದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತವೇ ಮರುಕಳಿಸಿದರೆ, ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆದು ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಸೂಚನೆ ಇದೆ.

ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ

ಮತ್ತೊಂದೆಡೆ ಕಾಂಗ್ರೆಸ್ನ ಆಂತರಿಕ ಒಳ ಒಪ್ಪಂದದ ಪ್ರಕಾರ ಅಕಾರ ಹಂಚಿಕೆಯಾಗಲಿದೆ ಎಂದು ಒಂದು ಬಣ ಪ್ರತಿಪಾದಿಸುತ್ತಿದೆ. ಆದರೆ ಇದನ್ನು ಅಲ್ಲಗಳೆಯುತ್ತಿರುವ ಸಿದ್ದರಾಮಯ್ಯ ಅವರ ತಂಡ ಪೂರ್ಣಾವಧಿ ಮುಖ್ಯಮಂತ್ರಿಯಾಗಲಿದ್ದಾರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡುತ್ತಿದೆ.

ಇದರ ನಡುವೆ ಮೂಲ ಕಾಂಗ್ರೆಸಿಗರ ಹೆಸರಿನಲ್ಲಿ ಹರಿಪ್ರಸಾದ್, ವೀರಪ್ಪ ಮೊಯ್ಲಿ ಸೇರಿದಂತೆ ಕೆಲವು ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ವ್ಯಕ್ತಪಡಿಸುತ್ತಿರುವ ಅಸಹನೆ ಗುಟ್ಟಾಗಿ ಉಳಿದಿಲ್ಲ. ಇದಕ್ಕೆಲ್ಲಾ ಪ್ರತ್ಯುತ್ತರ ನೀಡುವಂತೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ಮತ್ತೊಂದು ಬೃಹತ್ ಸಮಾವೇಶವನ್ನು ನಡೆಸುವ ತಯಾರಿ ನಡೆದಿದೆ.

ಈಗಾಗಲೇ ಇದಕ್ಕೆ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು, ಹಲವಾರು ಉಪಸಮಿತಿಗಳನ್ನು ರಚಿಸಲಾಗುತ್ತಿದೆ. ಶೋಷಿತ ಸಮುದಾಯಗಳು ಅವಕಾಶ ವಂಚಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಸಮಾವೇಶ ನಡೆಸುತ್ತಿರುವುದಾಗಿ ಮುಖಂಡರು ಹೇಳುತ್ತಿದ್ದಾರೆ.

ಆದರೆ ಸಮಾವೇಶದ ಮೂಲ ಧಾತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ರಹಸ್ಯವೇನಲ್ಲ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾದ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿಯ ಜಾರಿಗೂ ಈ ಸಮಾವೇಶ ಒತ್ತಡ ಹೇರಲಿದೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತಗಳನ್ನು ಕಾಂಗ್ರೆಸ್ನತ್ತ ಆಕರ್ಷಿಸುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಅನಿವಾರ್ಯ ಎಂಬ ಸಮರ್ಥನೆ ಕೇಳಿಬರುತ್ತಿವೆ.

ಐಎನ್‍ಎಸ್ ಸುದ್ದಿಸಂಸ್ಥೆಯ ಷೇರು ಖರೀದಿಸಿದ ಅದಾನಿ

ಆದರೆ ಇದಕ್ಕೆ ಎದುರೇಟು ಎಂಬಂತೆ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ವಿರೋಧಿ ಬಣವೂ ಕೂಡ ಸಮಾವೇಶ ಮಾಡಲು ಮುಂದಾಗಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News