ಬೆಂಗಳೂರು, ಡಿ.19- ಸಂಸತ್‍ನಲ್ಲಿನ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಸಂಸದರನ್ನು ಅಮಾನತು ಮಾಡುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ್ಯ ಭಾರತದಲ್ಲಿ ಈ ಮಟ್ಟಿನ ಅಸಮರ್ಥ ಕೇಂದ್ರ ಗೃಹಸಚಿವರನ್ನು ದೇಶ ಕಂಡಿರಲಿಲ್ಲ ಎಂದು ಟೀಕಿಸಿದ್ದಾರೆ. ಇದೇ ಅಧಿವೇಶನದಲ್ಲಿ ಸರಿಸುಮಾರು 100 ರಷ್ಟು ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇದು ಭದ್ರತಾ ಲೋಪವನ್ನು ಮುಚ್ಚಿಹಾಕುವ ಹುನ್ನಾರ. ಘಟನೆಯ ಬಗ್ಗೆ ಕೇಂದ್ರ ಗೃಹಸಚಿವರು ಉತ್ತರ ನೀಡಬೇಕೆ ಹೊರತು ಸಂಸದರ ಅಮಾನತುಗೊಳಿಸುವುದು ಸರಿಯಾದ ಕ್ರಮವಲ್ಲ ಎಂದರು.
ಸಂಸತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತಿರುವ ಸಂಸದರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿಲ್ಲ. ಬೇರೆ ರೀತಿಯ ದಾಳಿಯನ್ನೂ ಮಾಡುತ್ತಿಲ್ಲ. ಸಂವಿಧಾನಾತ್ಮಕ ಹಾಗೂ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಹಾಗಿದ್ದರೂ ಅಮಾನತುಗೊಳಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಸಲಿಂಗ ದಂಪತಿಗಳನ್ನು ಆಶೀರ್ವದಿಸಲು ಪೋಪ್ ಅನಮೋದನೆ
ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಭದ್ರತಾ ಲೋಪ ಗಂಭೀರವಾದ ಪ್ರಕರಣ ಎಂದು ಹೇಳಿದ್ದಾರೆ. ಅದಕ್ಕಾಗಿ ಕೇಂದ್ರ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ಕೇಳುವುದು ತಪ್ಪೇ. ಅಮಿತ್ ಷಾ ಅವರ ಅಸಮರ್ಥತೆಯನ್ನು ಹಾಗೂ ಮೈಸೂರಿನ ಸಂಸದರ ಬೇಜವಾಬ್ದಾರಿತನವನ್ನು ಮರೆಮಾಚುವ ಷಡ್ಯಂತ್ರಗಳಾಗುತ್ತಿವೆ ಎಂದು ಹೇಳಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ತಾವು ಹಲವು ಬಾರಿ ದೆಹಲಿಗೆ ಭೇಟಿ ನೀಡಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲು ಪ್ರಯತ್ನಿಸಿದ್ದೆವು. ಯಾರೂ ಸಮಯಾವಕಾಶ ನೀಡಲಿಲ್ಲ. ಈಗ ಪ್ರಧಾನಿಯವರಿಗೆ ಪುರುಸೊತ್ತಾಗಿದ್ದು ಮುಖ್ಯಮಂತ್ರಿಯವರ ಭೇಟಿಗೆ ಸಮಯ ನೀಡಿದ್ದಾರೆ. ಬಹುಷಃ ಈಗಲಾದರೂ ಎನ್‍ಡಿಆರ್‍ಎಫ್ ನಡಿ ರಾಜ್ಯಕ್ಕೆ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಲ್ಬುರ್ಗಿಯಲ್ಲಿ ಭ್ರಷ್ಟಾಚಾರ ಮುಕ್ತ ಹಾಗೂ ಸುರಕ್ಷಿತ ವಾತಾವರಣ ನಿರ್ಮಿಸುವ 6ನೇ ಗ್ಯಾರಂಟಿಯನ್ನು ಜಾರಿಗೊಳಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಮಟ್ಕಾ, ಡ್ರಗ್ಸ್, ಜೂಜು ಸೇರಿದಂತೆ ಎಲ್ಲಾ ದಂಧೆಗಳನ್ನೂ ಮಟ್ಟ ಹಾಕಲಾಗಿದೆ. ಬಿಜೆಪಿಯ ಹಿಂದಿನ ಶೇ.40 ರಷ್ಟು ಕಮಿಷನ್, ಕೊರೊನ ಹಗರಣಗಳ ತನಿಖೆಗೆ ಆಯೋಗಗಳು ರಚನೆಯಾಗಿವೆ. ಪಿಎಸ್‍ಐ ನೇಮಕಾತಿಯ ಅಕ್ರಮಗಳ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.