ಬೆಂಗಳೂರು,ಸೆ.30- ಬಿಜೆಪಿ ಬೆಂಕಿ ಇದ್ದಂತೆ, ಜೆಡಿಎಸ್ ಅದನ್ನು ತಬ್ಬಿಕೊಳ್ಳಲು ಹೋಗುತ್ತಿದೆ, ಕಾಂಗ್ರೆಸ್ ಕೋಮುವಾದಿ ಪಕ್ಷದೊಂದಿಗೆ ಇಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಎಚ್ಬಿಆರ್ ಲೇಔಟ್ನಲ್ಲಿ ನಿರ್ಮಿಸಲಾಗಿರುವ ಬ್ಯಾರಿಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಇಲ್ಲಿ ಬದುಕುವ ಎಲ್ಲರೂ ಜಾತಿ ಹಾಗೂ ಧರ್ಮಾತೀತರಾಗಿರಬೇಕು. ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲಾ ಸಮುದಾಯಗಳು ಪರಸ್ಪರ ಸೌಹಾರ್ದತೆಯಿಂದ ಬದುಕಬೇಕು. ಪರಸ್ಪರ ನಂಬಿಕೆ, ಮಾನವೀಯತೆ ಇಲ್ಲದೆ ಹೋದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಉಳಿಯು ವುದಿಲ್ಲ. ಅದು ದೇಶದ ಅಭಿವೃದ್ಧಿ ಹಾಗೂ ಪ್ರಗತಿಗೆ ಧಕ್ಕೆ ತರಲಿದೆ ಎಂದು ಹೇಳಿದರು.
ಜನತಾದಳ ವಿಭಜನೆಯಾದಾಗ ಸಂಯುಕ್ತ ಜನತಾದಳ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆ ಇದ್ದುದರಿಂದಾಗಿ ತಾವು ಆ ಗುಂಪಿನಲ್ಲಿ ಗುರುತಿಸಿಕೊಳ್ಳಲಿಲ್ಲ. ಜಾತ್ಯತೀತ ಜನತಾದಳದಲ್ಲಿ ನಾನೂ ಸೇರಿದಂತೆ ಅನೇಕರು ಉಳಿದುಕೊಂಡಿದ್ದೆವು. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ ಎಂದು ಸ್ಮರಿಸಿಕೊಂಡರು.
ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದಾಗ ದೇವೇಗೌಡರು ಹೇಳಿದ ಮಾತುಗಳನ್ನು ಮತ್ತೆ ಸ್ಮರಿಸಿಕೊಳ್ಳಬೇಕು. ಈಗ ಜನತಾದಳದ ಉಳಿವಿಗಾಗಿ ಬಿಜೆಪಿ ಜೊತೆ ಹೋಗುವುದಾಗಿ ದೇವೇಗೌಡರು ಹೇಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆ ಯಾದರೂ ಹೊಂದಾಣಿಕೆ ಮಾಡಿಕೊಳ್ಳುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಎಂದಿಗೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅದು ಕೋಮುವಾದಿ ಪಕ್ಷ ಎಂದು ದೂರಿದರು.
ಬಿಜೆಪಿಯವರೇಕೆ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಸಂವಿಧಾನವನ್ನು ಒಪ್ಪದೇ ಇರುವವರು ಪ್ರಜಾಪ್ರಭುತ್ವದಲ್ಲಿರುವುದು ಒಳ್ಳೆಯದಲ್ಲ. ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟುವುದು, ಧರ್ಮ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವುದು ರಾಜಕಾರಣವಲ್ಲ. ಜನರಿಗಾಗಿ ರಾಜಕಾರಣ ಮಾಡಬೇಕೆ ಹೊರತು ಜನ ಹಾಗೂ ಸಮಾಜವನ್ನು ಬಿಟ್ಟು ರಾಜಕಾರಣ ಮಾಡಬಾರದು ಎಂದು ಹೇಳಿದರು.
ರಾಜ್ಯಸಭಾ ಸದಸ್ಯರಾಗಿದ್ದ ಫಾರುಖ್ ಅಬ್ದುಲ್ಲಾ ಜೆಡಿಎಸ್ನಲ್ಲಿ ಮೂಲೆಗುಂಪಾಗಿದ್ದಾರೆ. ತಮ್ಮ ಪಕ್ಷಕ್ಕೆ ಬರುವಂತೆ ಅವರನ್ನು ಆಹ್ವಾನಿಸಲಾಗಿತ್ತು. ಆದರೂ ಅವರು ಬರಲಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು.
ಬಿಜೆಪಿ ಸಂಸದರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಜೆಡಿಎಸ್ ತನ್ನ ಉಳಿವಿಗಾಗಿ ಬಿಜೆಪಿಯನ್ನು ತಬ್ಬಿಕೊಳ್ಳುತ್ತಿರುವುದಾಗಿ ಹೇಳುತ್ತಿದೆ. ಆದರೆ ಬಿಜೆಪಿ ಬೆಂಕಿ ಇದ್ದಂತೆ. ಅವರಿಗೆ ಸಮಾಜದ ನಡುವೆ ಬೆಂಕಿ ಹಚ್ಚುವುದೇ ಕೆಲಸ. ನಮ್ಮ ಸರ್ಕಾರದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲರಿಗೂ ರಕ್ಷಣೆ ಇದೆ. ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ 3 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡಿದ್ದೆ. ಅದನ್ನು ಕಾಂಗ್ರೆಸೇತರ ಸರ್ಕಾರಗಳು ಕಡಿಮೆ ಮಾಡಿವೆ. ಸಾಮಾಜಿಕ ನ್ಯಾಯ, ಸಮಾನತೆ, ಸಂಪತ್ತಿನ ಹಂಚಿಕೆ ಸರ್ಕಾರಗಳ ಜವಾಬ್ದಾರಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರಿಗೂ ನ್ಯಾಯ ದೊರಕಿಸುವುದು ತಮ್ಮ ಆದ್ಯತೆ. ಪಂಚಖಾತ್ರಿ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳು ಜಾತ್ಯತೀತವಾಗಿವೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಅನುಭವಿಸಿದ್ದ ಆತಂಕದ ವಾತಾವರಣ ನಿವಾರಣೆಯಾಗಿದೆ. ತಮ್ಮ ಸರ್ಕಾರ ಅಲ್ಪಸಂಖ್ಯಾತರನ್ನು ಸೇರಿ ಎಲ್ಲಾ ಸಮುದಾಯಗಳಿಗೂ ರಕ್ಷಣೆ ನೀಡಲಿದೆ ಎಂದು ಹೇಳಿದರು.
ಈ ಹಿಂದೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿತ್ತು. ಅದರಲ್ಲಿ 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ ಎಂದು ಅಂದಿನ ಬಿಜೆಪಿ ಸರ್ಕಾರ ಹೇಳಿಕೊಂಡಿತ್ತು. ಆದರೆ ಕರಾವಳಿಯ ಮಂಗಳೂರು, ಉಡುಪಿ, ಉತ್ತರಕನ್ನಡ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ನಿರೀಕ್ಷಿತ ಪ್ರಮಾಣದ ಹೂಡಿಕೆ ಬರಲಿಲ್ಲ. ಕಾರಣ ಅಲ್ಲಿ ನಡೆಯುತ್ತಿದ್ದ ಕೋಮುಗಲಭೆಗಳು ಎಂದು ಹೇಳಿದರು.
ತಮ್ಮ ಸರ್ಕಾರ ಕೋಮು ಪ್ರಚೋದಿತ ವಿಷಯಗಳಿಗೆ ಅವಕಾಶ ನೀಡುವುದಿಲ್ಲ. ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ತಾವು ಚರ್ಚೆ ನಡೆಸಿದ್ದೇವೆ. ಗೋವಾ ಮಾದರಿಯಲ್ಲಿ ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ ಹೊಸ ನೀತಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಸಮುದಾಯದ ಯು.ಟಿ.ಖಾದರ್ ಅವರು ವಿಧಾನಸಭೆ ಅಧ್ಯಕ್ಷ ಸ್ಥಾನದಂತಹ ಉನ್ನತ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ಸ್ಪೀಕರ್ ಆಗಿದ್ದ ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾದರು. ಸಚಿವ ಸ್ಥಾನ ಸಿಗಲಿಲ್ಲ ಎಂದು ಯು.ಟಿ.ಖಾದರ್ ಕೊರಗುವುದು ಬೇಡ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಯಾರಿಗೆ ಗೊತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ಗುಂಡೂರಾವ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಸೌಹಾರ್ದ ಭವನ ಸಮಿತಿಯ ಅಧ್ಯಕ್ಷ ಸಯ್ಯದ್ ಮಹಮ್ಮದ್ ಬ್ಯಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.