ಬೆಂಗಳೂರು,ಡಿ.26- ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯ ದಂತೆ ನಗರದಾದ್ಯಂತ ಸೂಕ್ತ ಬಂದೋಬಸ್ತ್‍ಗೆ ಅಧಿಕಾರಿ ಗಳು ಸೇರಿದಂತೆ 8,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷ ಆಚರಣೆಗೆ ಪ್ರಮುಖ ಸ್ಥಳಗಳಾದ ಎಂಜಿರಸ್ತೆ, ಬ್ರಿಗೇಡ್ ರಸ್ತೆ, ಸೆಂಟ್‍ಮಾರ್ಕ್ ರಸ್ತೆ, ಟ್ರಿನಿಟಿ ಸರ್ಕಲ್ ಸೇರಿದಂತೆ ಸ್ಟಾರ್ ಹೋಟೆಲ್, ಕ್ಲಬ್‍ಗಳಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ ಮಾಡಿಕೊಡಲಾಗಿದೆ. ಜನರ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಯಾವುದೇ ಕಾರಣಕ್ಕೂ ಮಹಿಳೆ ಮತ್ತು ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿ ಸೂಕ್ತ ಬಂದೋಬಸ್ತ್ ಮಾಡುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ ಮಹಿಳಾ ಚೌಕಿ ತೆರೆಯಲಾಗುತ್ತದೆ. ಇದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಇರಲಿದ್ದಾರೆ. ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲು ಇಡಲು ವೀಕ್ಷಣಾ ಗೋಪುರಗಳು, ಹೆಚ್ಚುವರಿ ಸಿಸಿ ಕ್ಯಾಮೆರಾಗಳು ಸೇರಿದಂತೆ ಡ್ರೋಣ್ ಕ್ಯಾಮೆರಾಗಳನ್ನು ಉಪಯೋಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ರಾಜ್ಯ ಬಿಜೆಪಿಯಲ್ಲಿ ಮತ್ತೆ ಪಾರುಪತ್ಯ ಸಾಧಿಸಿದ ಬಿಎಸ್‍ವೈ
ಮಕ್ಕಳು ಕಾಣೆಯಾದಲ್ಲಿ, ಯಾವುದೇ ರೀತಿಯ ದೂರುಗಳು ಅಥವಾ ತುರ್ತು ಸಂದರ್ಭಗಳಲ್ಲಿ ಪೊಲೀಸರನ್ನು ಸಂಪರ್ಕಿಸಲು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಕಿಯೋಸ್ಕ್‍ಗಳನ್ನು ತೆರೆಯಲಾಗುವುದು. ಮದ್ಯಪಾನ ಮಾಡಿ ದುವರ್ತನೆ ತೋರಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದಲ್ಲಿ ತಕ್ಷಣ ದೂರವಾಣಿ ಸಂಖ್ಯೆ 112ಗೆ ಕರೆ ಮಾಡಿ ಎಂದು ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.
ಎಂಜಿರೋಡ್ ಬ್ರಿಗೇಡ್ ರೋಡ್‍ನಲ್ಲಿ 3000ಕ್ಕೂ ಹೆಚ್ಚು ಪೊಲೀಸ್:
ವರ್ಷಾಚರಣೆ ನಗರದ ಕೇಂದ್ರ ಸ್ಥಳಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ನಾಲ್ಕು ಡಿಸಿಪಿ, ಹತ್ತು ಎಸಿಪಿ, 30 ಜನ ಪೊಲೀಸ್, ಇನ್ಸ್‍ಪೆಕ್ಟರ್ ಸೇರಿದಂತೆ ಒಟ್ಟು 3 ಸಾವಿರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗುವುದು.
ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನದಳ ಮತ್ತು 10 ಎಎಸ್ ಚೆಕ್ ಪೋಸ್ಟ್ ತಂಡಗಳು ತಪಾಸಣೆ ಕೈಗೊಳ್ಳಲಿದ್ದು, ಇಬ್ಬರು ಹೆಚ್ಚುವರಿ ಆಯುಕ್ತರು, ಒಬ್ಬರು ಜಂಟಿ ಆಯುಕ್ತರು, 15 ಡಿಸಿಪಿಗಳು, 45 ಎಸಿಪಿಗಳು, 160 ಪೊಲೀಸ್ ಇನ್ಸ್‍ಪೆಕ್ಟರ್, 600 ಸಬ್‍ಇನ್ಸ್‍ಪೆಕ್ಟರ್‍ಗಳು, 600 ಎಎಸ್‍ಐ, 1800 ಹೆಡ್‍ಕಾನ್ಸ್‍ಪೆಕ್ಟರ್‍ಗಳು, 5200 ಕಾನ್‍ಸ್ಟೇಬಲ್‍ಗಳು ಸೇರಿದಂತೆ 8500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.
ಈ ಕುರಿತು ಗೃಹ ಸಚಿವ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ, ಮೆಟ್ರೋ ಹಾಗೂ ಇತರೆ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಅವರ ಸಲಹೆ ಸೂಚನೆ ಮೇರೆಗೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.