ಬೆಂಗಳೂರು, ಏ.7- ನಾಡಿನ ಪ್ರಭಾವಿ ಸ್ವಾಮೀಜಿಯೊಬ್ಬರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ದೂರು ನೀಡಿದ್ದಾರೆ. ನಗರದ ತ್ಯಾಗರಾಜನಗರದ ನಿವಾಸಿ ಮಹಿಳೆಯೊಬ್ಬರು ಮಠದ ಭಕ್ತೆಯಾಗಿ ದ್ದು, ಸದರಿ ಮಠದ ಸ್ವಾಮೀಜಿಯವರು ಬೆಂಗಳೂರಿಗೆ ಬಂದಾಗ ಭೇಟಿಯಾಗಿ, ಮಾತನಾಡುತ್ತಿದ್ದೆ.
ಅವರ ಹೋರಾಟ ಗಳಿಗೂ ಬೆಂಬಲ ನೀಡಿದ್ದೇನೆ. ಹೀಗೆ ಪರಿಚಯವಾಗಿದ್ದ ಸ್ವಾಮೀಜಿಯವರು ನನ್ನನ್ನು ಮಠಕ್ಕೆ ಕರೆಸಿ ಪ್ರಸಾದ ಕೊಡು ತ್ತೇನೆ ಎಂದು ಹೇಳಿ, ನನ್ನ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಂಡು ನನ್ನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಅಸಭ್ಯವಾದ ಪದಗಳನ್ನು ಬಳಕೆ ಮಾಡಿದ್ದಾರೆ.
ಮೈ-ಕೈ ಮುಟ್ಟುತ್ತಾ ನನ್ನೊಂದಿಗೆ ದೈಹಿಕವಾಗಿ ತಪ್ಪಾಗಿ ವರ್ತಿಸಿದ್ದಾರೆ. ಆ ಸಮಯದಲ್ಲಿ ನನ್ನ ತಿಳಿವಳಿಕೆ ಇಲ್ಲದೆ ನನ್ನ ಮೇಲೆ ಅವರು ನಡೆಸಿರುವ ಲೈಂಗಿಕ ದೌರ್ಜನ್ಯದ ಖಾಸಗಿ ವಿಡಿಯೋವನ್ನು ಮಾಡಿಕೊಂಡಿದ್ದು, ಅದನ್ನು ಬಳಸಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್ ಮಾಡು ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಈ ಕಾರಣದಿಂದ ನನಗೆ ಭಯ, ಮಾನಸಿಕ ಒತ್ತಡ, ಅವಮಾನ ಉಂಟಾಗಿದೆ. ಸದರಿ ಸ್ವಾಮೀಜಿ ನನಗೆ ಕರೆ ಮಾಡಿ ಮಾತನಾಡಿರುವ ಮತ್ತು ಅವರು ನನ್ನೊಡನೆ ಇರುವ ಕೆಲವು ಫೋಟೊ ಮತ್ತು ಆಡಿಯೋ ರೆಕಾರ್ಡ್‌ಗಳನ್ನು ತನಿಖೆ ಸಂದರ್ಭದಲ್ಲಿ ಕೊಡಲು ಸಿದ್ಧಳಿರುತ್ತೇನೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ದೂರು ನೀಡಿದ್ದಾರೆ. ಜೊತೆಗೆ ತಮ ದೂರಿನೊಂದಿಗೆ ಕಾಲ್ ರೆಕಾರ್ಡ್‌ಗಳು, ವಾಟ್ಸಾಪ್ ಮೆಸೇಜ್‌ಗಳು, ಬೆದರಿಕೆಯ ಆರೋಪಕ್ಕೆ ಪೂರಕ ಸಾಕ್ಷಿಗಳು, ಕರೆಗಳ ಮಾಹಿತಿ ಇರುವ ಸಿಡಿಆರ್ ಪಟ್ಟಿ ಸೇರಿದಂತೆ ಹಲವಾರು ದಾಖಲೆಗಳನ್ನು ಒದಗಿಸಲಾಗಿದೆ.
ಹಲವಾರು ತಿಂಗಳುಗಳಿಂದ ತೆರೆಮರೆಯಲ್ಲಿ ಕೇಳಿ ಬರುತ್ತಿದ್ದ ಆರೋಪ ಈಗ ಬಹಿರಂಗ ಚರ್ಚೆಗೆ ಗ್ರಾಸವಾಗಿದೆ. ಮಹಿಳೆ ಸ್ವಾಮೀಜಿಯ ವಿರುದ್ಧ ನೇರವಾಗಿ ಆರೋಪ ಮಾಡಿದ್ದು, ತಮಗೆ ಸೂಕ್ತ ರಕ್ಷಣೆ ನೀಡಬೇಕು, ತಪ್ಪಿತಸ್ಥ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
