Saturday, December 6, 2025
Homeಬೆಂಗಳೂರುಈರುಳ್ಳಿ ಮೂಟೆಯಲ್ಲಿಟ್ಟು ಸಾಗಿಸುತ್ತಿದ್ದ 1.75 ಕೋಟಿ ವೌಲ್ಯದ ಶ್ರೀಗಂಧ ವಶ, ಮೂವರ ಬಂಧನ

ಈರುಳ್ಳಿ ಮೂಟೆಯಲ್ಲಿಟ್ಟು ಸಾಗಿಸುತ್ತಿದ್ದ 1.75 ಕೋಟಿ ವೌಲ್ಯದ ಶ್ರೀಗಂಧ ವಶ, ಮೂವರ ಬಂಧನ

Sandalwood worth Rs 1.75 crores being transported in onion bags seized, three arrested

ಬೆಂಗಳೂರು,ಡಿ.4- ನಗರ ಪೊಲೀಸರು ಮೂವರು ಶ್ರೀಗಂಧ ಚೋರರನ್ನು ಬಂಧಿಸಿ 1.75 ಕೋಟಿ ಮೌಲ್ಯದ ರಕ್ತ ಚಂದನ ಹಾಗೂ ನಾಲ್ಕು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಹುಳಿಮಾವು: ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗೆರೆ ಕೆರೆಯ ಬಳಿ ಕಾರೊಂದರಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿಟ್ಟುಕೊಂಡು ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿ ಒಬ್ಬನನ್ನು ಬಂಧಿಸಿ, ಕಾರಿನ ಸಮೇತ 95 ಕೆಜಿ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಸಹಚರರೊಂದಿಗೆ ಸೇರಿಕೊಂಡು ಆಂಧ್ರಪ್ರದೇಶದ ಕಡಪ ಜಿಲ್ಲೆಯ ವ್ಯಕ್ತಿಯೊಬ್ಬನಿಂದ ಕಡಿಮೆ ಬೆಲೆಗೆ ರಕ್ತ ಚಂದನವನ್ನು ಖರೀದಿಸಿ ಹೆಚ್ಚಿನ ಬೆಲೆಗೆ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾನೆ.

ಆರೋಪಿ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಚಿನ್ನಕಂದಿಲಿ ಗ್ರಾಮದಲ್ಲಿ 316 ಕೆಜಿ ರಕ್ತ ಚಂದನ ಹಾಗೂ ಕಾರು, ಕುಲುಮೆಪಾಳ್ಯದಲ್ಲಿ 496 ಕೆಜಿ ರಕ್ತ ಚಂದನ, ಕಾರು ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ 1,143 ಕೆಜಿ ರಕ್ತ ಚಂದನವನ್ನು ಇನ್‌ಸ್ಪೆಕ್ಟರ್‌ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ತಂಡ ವಶಪಡಿಸಿಕೊಂಡಿದ್ದು, ಇತರೆ ಸಹಚರರ ಪತ್ತೆಕಾರ್ಯ ಮುಂದುವರೆದಿದೆ.

ಆರ್‌ಟಿನಗರ:
ಬುಲೆರೋ ವಾಹನದಲ್ಲಿ ರಕ್ತ ಚಂದನ ಸಂಗ್ರಹಿಸಿಕೊಂಡು ಸಾಗಾಣೆ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಆರ್‌ಟಿನಗರ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೆಹೆಚ್‌ಎಂ ಬ್ಲಾಕ್‌ನ ಈರುಳ್ಳಿ ಮೈದಾನದಲ್ಲಿ ಇಬ್ಬರನ್ನುಬಂಧಿಸಿ 75.4 ಲಕ್ಷ ಮೌಲ್ಯದ 754 ಕೆಜಿ 200 ಗ್ರಾಂ ರಕ್ತ ಚಂದನದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಆಂಧ್ರಪ್ರದೇಶ ರಾಜ್ಯದವರಾಗಿದ್ದು, ಯಾವುದೇ ಉದ್ಯೋಗವಿಲ್ಲದೇ ಜೀವನ ನಿರ್ವಹಣೆ ಮಾಡಲು ಹಣ ಸಂಪಾದನೆಗಾಗಿ ಇವರಿಬ್ಬರೂ ಸೇರಿಕೊಂಡು ಆಂಧ್ರದ ಮದನಪಲ್ಲಿಯ ಸುಂಡೆಪಲ್ಲಿ ಭಾಗದಿಂದ ರಕ್ತ ಚಂದನ ಮರದ ತುಂಡುಗಳನ್ನು ಕಳವು ಮಾಡಿಕೊಂಡು ಮಾರಾಟ ಮಾಡುವ ಸಲುವಾಗಿ ನಗರಕ್ಕೆ ಬಂದಿರುವುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ.

ಆರೋಪಿಗಳು ಈರುಳ್ಳಿ ಮೂಟೆಗಳ ಮಧ್ಯೆ ಶ್ರೀಗಂಧ ಮರದ ತುಂಡುಗಳನ್ನು ಇಟ್ಟುಕೊಂಡು ಬೆಂಗಳೂರಿಗೆ ತಂದಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್‌ ಚಿತ್ತರಂಜನ್‌ ಹಾಗೂ ಸಬ್‌ಇನ್‌ಸ್ಪೆಕ್ಟರ್‌ ಸುಭಾಷ್‌ ಹೆಚ್‌ ಲಮಾಣಿ ಮತ್ತು ಸಿಬ್ಬಂದಿ ತಂಡ ಕೈಗೊಂಡು ಇಬ್ಬರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News