ಬೆಂಗಳೂರು,ಅ.1- ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರವನ್ನು ರೂಪಿಸುವುದು ಅಗತ್ಯ ಎಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕಷ್ಟ ಸೂತ್ರ ರೂಪಿಸುವ ಮೂಲಕ ಕಾವೇರಿ ವಿವಾದಕ್ಕೆ ತೆರೆ ಎಳೆಯಬೇಕು. ಕಾವೇರಿ ನದಿಪಾತ್ರದ ನಾಲ್ಕೂ ರಾಜ್ಯಗಳು ಸಂಕಷ್ಟ ಸೂತ್ರದ ಬಗ್ಗೆ ಚರ್ಚಿಸಿ ಆನಂತರ ಸಂಕಷ್ಟ ಸೂತ್ರದ ಚೌಕಟ್ಟಿನಲ್ಲಿ ನದಿ ನೀರು ನಿರ್ವಹಣೆ ಬಗ್ಗೆ ಸೂಕ್ತ ತೀರ್ಮಾನವನ್ನು ಮಾಡಬೇಕು ಎಂದು ಸಲಹೆ ಮಾಡಿದರು.
ತಾವು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಕಾವೇರಿ ವಿಚಾರದಲ್ಲಿ ಇಂಥದ್ದೇ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಂಧಾನ ಮಾಡಲು ಯತ್ನ ಮಾಡಿದರೂ ಸಫಲವಾಗಲಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು ಎಂದು ಹೇಳಿದರು. ಆಗ ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೆಂಕಟಾಚಲ ಅವರಂತಹ ಕಾನೂನು ಪರಿಣಿತರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲಾಗುತ್ತಿತ್ತು. ಅದೇ ರೀತಿ ಈ ಸರ್ಕಾರವು ಮುಂದುವರೆಯಬೇಕು ಎಂದು ಅವರು ಸಲಹೆ ನೀಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ
ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಕಡಿಮೆಯಾದಾಗ ಕಾವೇರಿ ವಿಚಾರ ಸದ್ದು ಮಾಡುತ್ತದೆ. ಮಳೆಗಾಲ ಕ್ಷೀಣಿಸಿದಾಗ ನೀರಿಗಾಗಿ ಒತ್ತಡ ಉಂಟಾಗಲಿದೆ. ತಮಿಳುನಾಡಿನ ಹೇಳಿಕೆಗಳು ಬಹಳ ಮಟ್ಟಿಗೆ ವಸ್ತುಸ್ಥಿತಿಗೆ ನಾಚಿಸುವಂತಿವೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ತೆಗೆದುಕೊಂಡ ನಿಲುವನ್ನು ಸಮರ್ಥಿಸುವುದಾಗಿ ಹೇಳಿದರು.
ರಾಜಕಾರಣ ಮಾತನಾಡು ವುದಿಲ್ಲ: ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಸ್.ಎಂ.ಕೃಷ್ಣಾ ಅವರು ನಾನೀಗ ರಾಜಕಾರಣದಲ್ಲಿ ಇಲ್ಲ. ಹೀಗಾಗಿ ಮೈತ್ರಿ ವಿಚಾರದಲ್ಲಿ ನನ್ನ ನಿಲುವು ಅಪ್ರಸ್ತುತ ಎಂದರು.