ಬೆಂಗಳೂರು,ಡಿ.30- ನಡೆದು ಹೋಗುತ್ತಿದ್ದ ಪಾದಚಾರಿಗಳಿಗೆ ವಾಟರ್ ಟ್ಯಾಂಕ್ ಡಿಕ್ಕಿ ಹೊಡೆದು ಬಾಲಕ ಸೇರಿ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನಿಗೆ ಒಂದು ವರ್ಷ ಕಾರಾಗೃಹ ವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ 2ನೇ ಸಂಚಾರ ನ್ಯಾಯಾಲಯ ತೀರ್ಪು ನೀಡಿದೆ. ನವೀನ್‍ಕುಮಾರ್(33) ಶಿಕ್ಷೆಗೊಳಗಾದ ವಾಟರ್‍ಟ್ಯಾಂಕ್ ಚಾಲಕ.
ಗಾಂಧಿನಗರ 5ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆಯಲ್ಲಿ 2010 ಜುಲೈ 19 ರಂದು ಬೆಳಿಗ್ಗೆ 9 ಗಂಟೆ ಸುಮಾರಿನಲ್ಲಿ ವಾಟರ್ ಟ್ಯಾಂಕ್ ಚಾಲನೆ ಮಾಡಿಕೊಂಡು ಬಂದ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದಾಗಿ ಏಕಾಏಕಿ ಎಡಭಾಗಕ್ಕೆ ವಾಹನ ತಿರುಗಿಸಿದಾಗ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ, ನಂತರ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಂಜಯ್‍ಕುಮಾರ್(11) ಸ್ಥಳದಲ್ಲೇ ಮೃತಪಟ್ಟರೆ, ಶಿವಲೀಲಾ(47) ಎಂಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಸರಸ್ವತಮ್ಮ(45) ಮತ್ತು ಪಾರ್ಥಬ(12), ಅಭಿಲಾಷ್(12) ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಪ್ರಕರಣವನ್ನು ತನಿಖೆ ಕೈಗೊಂಡ ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತನ ಬಳಿ ಚಾಲನ ಅರ್ಹತಾ ಪತ್ರ ಇಲ್ಲದಿರುವುದು ತನಿಖೆಯಿಂದ ದೃಢಪಟ್ಟಿದೆ. ತನಿಖೆ ಪೂರೈಸಿ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗಿತ್ತು.
ಸಂವಿಧಾನದ ಧ್ಯೇಯೋದ್ದೇಶಗಳ ಜಾರಿ ಸರ್ಕಾರದ ಜವಾಬ್ದಾರಿ : ಸಿಎಂ
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ದೋಷಿ ಎಂದು ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಗೆ 1 ವರ್ಷ ಕಾರಾಗೃಹ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಈ ಬಗ್ಗೆ ಆರೋಪಿಯು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅೀಧಿನ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿಹಿಡಿದಿದ್ದು, ಆರೋಪಿಗೆ ಸೆರೆಮನೆಯ ವಾರಂಟ್ ಅನ್ನು ಹೊರಡಿಸಿದೆ.