ಬೆಂಗಳೂರು, ಡಿ.4- ಆಧುನಿಕ ಸಲಕರಣೆಗಳನ್ನು ಬಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುವ ಜೊತೆಗೆ, ರಾಷ್ಟ್ರೀಯ ಭದ್ರತೆಗೂ ಆತಂಕ ಸೃಷ್ಟಿಸಿದ ಮತ್ತು ವಿವಿಧ ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದ ಕೇಂದ್ರ ಒಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಬೆಂಗಳೂರು ಇತ್ತೀಚೆಗೆ ಸೈಬರ್ ಅಪರಾಧಗಳ ತವರೂರಾಗಿ ಪರಿವರ್ತನೆಯಾಗುತ್ತಿದೆ. ಇಲ್ಲಿಯೇ ಕುಳಿತು ಅಮೆರಿಕಾದವರಿಗೆ ಡಿಜಿಟಲ್ ಅರೆಸ್ಟ್ ಮಾಡುವಂತಹ ಖತರ್‌ನಾಕ್ ಕೃತ್ಯಗಳು ಕೂಡ ಕಂಡು ಬಂದಿದ್ದವು. ಅಂತಾರಾಷ್ಟ್ರೀಯ ಕರೆಗಳನ್ನು ವಂಚಿಸುವುದು ಮತ್ತು ರಾಷ್ಟ್ರೀಯ ಭದ್ರತೆಗೆ ಆತಂಕ ಸೃಷ್ಟಿಸುವ ಚಾಳಿ ಮತ್ತೆ ಮುಂದುವರೆದಿದೆ.
ವೊಡಾಫೋನ್ ಲಿಮಿಟೆಡ್ ನ ನೋಂದಣಿ ಅಧಿಕಾರಿಯೊಬ್ಬರು ನವಂಬರ್ 28ರಂದು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ ಅನುಸಾರ ಕಾರ್ಯಾಚರಣೆ ನಡೆಸಲಾಗಿದೆ.
ನಗರದ ಎಲೆಕ್ಟ್ರಾನಿಕ್ ಸಿಟಿ ಫೇಸ್-2ನಲ್ಲಿರುವ ನಾಯ್ಡು ಲೇಔಟ್, ಶಾಂತಿಪುರದ ದೇವರಾಜ ಬಿಲ್ಡಿಂಗ್ ನ ನಾಲ್ಕನೇ ಮಹಡಿಯಲ್ಲಿ ಇದ್ದ ಡೆಟಾ ಸೆಂಟರ್ ನಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟು ಮಾಡುವ ಕೃತ್ಯಗಳಾಗುತ್ತಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಅಂತರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿರು ವುದರಿಂದ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟವಾಗುತ್ತಿದೆ ಎಂದು ವಿವರಿಸಲಾಗಿತ್ತು.
ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಸಿಸಿಬಿ ಸೈಬರ್ ಕ್ರೈಂ ಪೊಲೀಸರು, ಸಿಮ್ ಬಾಕ್ಸ್ ಗಳನ್ನು ಇರಿಸಿದ್ದ ಸ್ಥಳ ಪರಿಶೋಧನೆ ನಡೆಸಿದ್ದಾರೆ. ಸದರಿ ಮನೆಯಲ್ಲಿ 28 ಸಿಮ್ ಬಾಕ್ಸ್ ಗಳು, ವಿವಿಧ ಕಂಪನಿಯ 1193 ಸಿಮ್ ಕಾರ್ಡ್ ಗಳು, ಒಂದು ಲ್ಯಾಪ್‌ಟ್ಯಾಪ್ ಮೂರು ರೂಟರ್‌ರಸ, ಒಂದು ಎಂಐ ಪೋರ್ಟಬಲ್ ಸಿಸಿ ಕ್ಯಾಮೆರಾ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೊತ್ತ ಸುಮಾರು 40 ಲಕ್ಷ ರೂಪಾಯಿಗಳಷ್ಟಾಗಿದೆ.
ಆರೋಪಿಗಳು ಸಿಮ್ ಕಾರ್ಡ್‌ಗಳನ್ನು ಇತರೆ ಸೈಬರ್ ಅಪರಾಧಗಳಿಗೆ ಬಳಸಿರುವ ಸಾಧ್ಯತೆ ಕಂಡು ಬಂದಿದೆ. ಸಿಮ್ ಬಾಕ್ಸ್ ಗಳನ್ನು ಮತ್ತಿತರ ಅಪರಾಧಗಳಿಗೆ ಬಳಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಆರೋಪಿಗಳು ತಲೆಮರೆಸಿ ಕೊಂಡಿದ್ದು ಪತ್ತೆ ಕಾರ್ಯಚರಣೆ ಪ್ರಗತಿಯಲ್ಲಿದೆ. ಶಂಕಿತ ಆರೋಪಿ ಕೇರಳ ಮೂಲದವನಾಗಿದ್ದು ದುಬೈನಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಇದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ಬೆಂಗಳೂರಿನ ಎಲ್ಲಾ ಡೆಟಾ ಸೆಂಟರ್‌ಗಳಲ್ಲಿ ಅಳವಡಿಸಲಾಗಿರುವ ಮೂಲ ಸೌಕರ್ಯಗಳನ್ನು ಸೂಕ್ತವಾಗಿ ಪರಿಶೀಲಿಸಿ ಅಕ್ರಮವಾಗಿ ಸಿಮ್ ಬಾಕ್‌್ಸಗಳು ಕಂಡು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
