ಬೆಂಗಳೂರು,ಏ.17- ರಾಜ್ಯ ಸರ್ಕಾರ ಕೂಡಲೇ ಬರ ನಿರ್ವಹಣಾ ಸಮಿತಿಯನ್ನು ಸಕ್ರಿಯಗೊಳಿಸಿ ಯುದ್ಧೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಾಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ದೆಹಲಿಯಲ್ಲಿ ಕುಳಿತು ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಮೇಲಾಟಕ್ಕಿಂತ ರಾಜ್ಯದ ಜನರ ಹಿತ ಕಾಯುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಥಮ ಆದ್ಯತೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಅಭಾವದ ಮುನ್ಸೂಚನೆ ಹಾಗೂ ಅಂತರ್ಜಲ ಮಟ್ಟದ ತೀವ್ರ ಕುಸಿತದ ವರದಿಗಳು ಆತಂಕಕಾರಿಯಾಗಿವೆ. ಕರುನಾಡು ಬರದ ದವಡೆಗೆ ಸಿಲುಕುತ್ತಿರುವ ಈ ಸಂಕಷ್ಟದ ಸಮಯದಲ್ಲಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಆಡಳಿತವನ್ನು ಗಾಳಿಗೆ ತೂರಿ ಕುರ್ಚಿಗಾಗಿ ದೆಹಲಿ ಪ್ರವಾಸದಲ್ಲಿ ಮಗ್ನರಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಯ ಅನಿಶ್ಚಿತತೆಯ ಲಾಭ ಪಡೆದು ರೈತರನ್ನು ಲೂಟಿ ಮಾಡಲು ಕಾಳಸಂತೆಕೋರರು ಹೊಂಚು ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಜಿಲ್ಲೆಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಕೃತಕ ಅಭಾವ ಸೃಷ್ಟಿಯಾಗದಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸಲಹೆ ಮಾಡಿದ್ದಾರೆ.
ಬರದಿಂದ ಜಾನುವಾರುಗಳಿಗೆ ಮೇವಿನ ಸಂಕಷ್ಟ ಎದುರಾಗಲಿದೆ. ತಕ್ಷಣವೇ ತಾಲ್ಲೂಕು ಮಟ್ಟದಲ್ಲಿ ಮೇವು ಬ್ಯಾಂಕ್‌ಗಳನ್ನು ಸಕ್ರಿಯಗೊಳಿಸಿ. ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದ್ದಾರೆ.
ಭತ್ತ, ಜೋಳ ಹಾಗೂ ದ್ವಿದಳ ಧಾನ್ಯಗಳ ಇಳುವರಿ ಕುಂಠಿತಗೊಳ್ಳುವ ಭೀತಿಯಿದೆ. ಇದು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿಯಲಿದೆ. ಸರ್ಕಾರ ಈಗಲೇ ಬೆಳೆ ವಿಮೆ ಹಾಗೂ ಬರ ಪರಿಹಾರದ ಕ್ರಿಯಾ ಯೋಜನೆಯನ್ನು ರೂಪಿಸಿ, ಅನ್ನದಾತರಲ್ಲಿ ಆತವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.
ಅಂತರ್ಜಲ ಮಟ್ಟ ವೇಗವಾಗಿ ಕುಸಿಯುತ್ತಿದ್ದು, 12 ಜಿಲ್ಲೆಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ. ಶ್ರೀಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬರುವ ಮುನ್ನವೇ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.
