ಬೆಂಗಳೂರು, ಏ.17- ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ಭೇಟಿ ನೀಡುತ್ತಿದ್ದು, ಸಂಜೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಬಹಳ ದಿನಗಳ ನಂತರ ಇಬ್ಬರೂ ನಾಯಕರು ದೆಹಲಿಗೆ ಒಟ್ಟಿಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲಿ ನಡೆಯುವ ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಇಬ್ಬರು ಜೊತೆಯಾಗಿ ಭಾಗವಹಿಸಲಿದ್ದಾರೆ.
ಇಂದು ದೆಹಲಿಯಲ್ಲೇ ತಂಗಲಿರುವ ಇಬ್ಬರು ನಾಯಕರು ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರುಗಳನ್ನು ಭೇಟಿ ಮಾಡಲು ಪ್ರಯತ್ನ ನಡೆಸಲಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಸಂವಿಧಾನ ತಿದ್ದುಪಡಿಯ ಮೂರು ಪ್ರಮುಖ ಮಸೂದೆಗಳು ಮಂಡನೆಯಾಗಿದ್ದು, ನಿನ್ನೆಯಿಂದ ಅವುಗಳ ಮೇಲೆ ಚರ್ಚೆ ನಡೆದಿದೆ.ಇಂದು ಸಂಜೆ ಮಸೂದೆಗಳ ಅಂಗೀಕಾರಕ್ಕೆ ಮತ ಚಲಾವಣೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಮಸೂದೆಗಳ ಸಂಬಂಧಪಟ್ಟಂತೆ ಕಾರ್ಯತಂತ್ರದಲ್ಲಿ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಹುಲ್‌ಗಾಂಧಿ ಲೋಕಸಭೆಯಲ್ಲಿ, ಮಲ್ಲಿಕಾರ್ಜುನ್ ಖರ್ಗೆ ರಾಜ್ಯಸಭೆಯಲ್ಲಿ ಇಂದು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ನ ನಾಯಕರು ಹೆಚ್ಚು ಕಾರ್ಯದೊತ್ತಡದಲ್ಲಿದ್ದು, ರಾಜ್ಯ ನಾಯಕರಿಗೆ ಲಭ್ಯವಾಗುವುದು ಕಷ್ಟಸಾಧ್ಯವಾಗಿದೆ. ದೆಹಲಿಗೆ ತೆರಳಿರುವ ಹಿರಿಯ ಶಾಸಕರಲ್ಲಿ ಕೆಲವರು ಅಲ್ಲಿಯೇ ಬೀಡುಬಿಟ್ಟಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಬೆನ್ನಹತ್ತಲಿದ್ದಾರೆ.
ಬಾಕಿಯಿರುವ ಎರಡು ವರ್ಷಗಳ ಅವಧಿಗೆ ಸಚಿವ ಸ್ಥಾನ ಗಿಟ್ಟಿಸಲು ಶಾಸಕರು ಪ್ರಯತ್ನಿಸಿದ್ದರೆ, ಡಿ.ಕೆ.ಶಿವಕುಮಾರ್ ಬಣ ನಾಯಕತ್ವದ ವಿಚಾರವಾಗಿ ನಿಲುವು ಪ್ರಕಟಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದೆ. ವಿಧಾನಸಭೆ ಉಪಚುನಾವಣೆಗಳು ಮುಗಿದಿದ್ದು, ವಿವಿಧ ರಾಜ್ಯಗಳ ಚುನಾವಣೆಯೂ ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ರಾಜ್ಯ ನಾಯಕತ್ವದ ಸಂಬಂಧಪಟ್ಟಂತೆ ಹೈಕಮಾಂಡ್ ತಮ ನಿರ್ಧಾರವನ್ನು ಪ್ರಕಟಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ.
ಇಂದು ದೆಹಲಿಯಲ್ಲಿ ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆಯವರು ಲಭ್ಯವಾದರೆ, ಡಿ.ಕೆ.ಶಿವಕುಮಾರ್ ತಮ ಅಭಿಪ್ರಾಯವನ್ನು ಮಂಡಿಸಲಿದ್ದು, ಸಿದ್ದರಾಮಯ್ಯ ಅವರ ಅಧಿಕಾರವಧಿಯ ಬಗ್ಗೆಯೂ ಸ್ಪಷ್ಟತೆ ಸಿಗಲಿದೆ. ಈ ನಡುವೆ ಹಿರಿಯ ಶಾಸಕರ ಒತ್ತಡದಂತೆ ಸಚಿವ ಸಂಪುಟ ಪುನರ್ ರಚನೆ ಮಾಡಲು ಸಿದ್ದರಾಮಯ್ಯ ಹೈಕಮಾಂಡ್ ಬಳಿ ಅನುಮತಿ ಕೇಳಲಿದ್ದಾರೆ.
ಒಂದು ವೇಳೆ ಹೈಕಮಾಂಡ್ ಸಹಮತಿಸಿದರೆ, ಸಾಕಷ್ಟು ರಾಜಕೀಯ ಗೊಂದಲಗಳಿಗೆ ಒಮೆಲೆ ತೆರೆ ಬೀಳುವ ನಿರೀಕ್ಷೆಗಳಿವೆ. ಇದೇ ವೇಳೆ ರಾಜ್ಯಸಭೆ ಸದಸ್ಯರ ಆಯ್ಕೆಯ ಸಂಬಂಧಪಟ್ಟಂತೆಯೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ದೆಹಲಿ ನಾಯಕರ ಜೊತೆ ಚರ್ಚಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹಮದ್ ಖಾನ್ ಪರವಾಗಿ ಹೈಕಮಾಂಡ್ ಬಳಿ ವಕಾಲತು ವಹಿಸುವ ಸಾಧ್ಯತೆ ಇದೆ. ದಾವಣಗೆರೆ ವಿಧಾನಸಭೆಯ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಇಬ್ಬರು ಪ್ರಮುಖ ನಾಯಕರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರ ವಿರುದ್ಧವೂ ಕ್ರಮ ಜರುಗಿಸಬೇಕೆಂಬ ಒತ್ತಡಗಳು ಹೆಚ್ಚುತ್ತಿವೆ.
ರಾಜಣ್ಣ ಅವರನ್ನು ಹೈಕಮಾಂಡ್ ಒತ್ತಡಕ್ಕೆ ಮಣಿದು ಸಂಪುಟದಿಂದ ವಜಾಗೊಳಿಸಿದ್ದ ಸಿದ್ದರಾಮಯ್ಯ ಅವರು ಜಮೀರ್ ಅಹಮದ್ ಖಾನ್ ಅವರನೆನ್ನಾದರೂ ಉಳಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಸಚಿವ ಜಮೀರ್ ಅವರನ್ನು ಸಂಪುಟದಿಂದ ಕೈ ಬಿಡಿಸಲು ತಮದೇ ಆದ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ.ದೆಹಲಿ ಭೇಟಿಯ ವೇಳೆ ಈ ಎಲ್ಲಾ ಗೊಂದಲಗಳಿಗೂ ಪರಿಹಾರ ದೊರೆಯುವ ಸಾಧ್ಯತೆ ಇದೆ.
