Sunday, May 5, 2024
Homeರಾಜ್ಯಆಪರೇಷನ್ ಕಮಲಕ್ಕೆ ಒಳಗಾಗುವ ಶಾಸಕರು ಕಾಂಗ್ರೆಸ್‍ನಲ್ಲಿ ಇಲ್ಲ: ಚೆಲುವರಾಯಸ್ವಾಮಿ

ಆಪರೇಷನ್ ಕಮಲಕ್ಕೆ ಒಳಗಾಗುವ ಶಾಸಕರು ಕಾಂಗ್ರೆಸ್‍ನಲ್ಲಿ ಇಲ್ಲ: ಚೆಲುವರಾಯಸ್ವಾಮಿ

ಬೆಂಗಳೂರು,ಜ.2- ಆಪರೇಷನ್ ಕಮಲಕ್ಕೆ ಒಳಗಾಗುವ ಶಾಸಕರು ಕಾಂಗ್ರೆಸ್‍ನಲ್ಲಿ ಯಾರೂ ಇಲ್ಲ. ಆದರೆ ವಿರೋಧ ಪಕ್ಷಗಳಿಂದ 10ರಿಂದ 15 ಮಂದಿ ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ ಎಂದು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುನ್ನ ಅಥವಾ ನಂತರ 10-15 ಮಂದಿ ಕಾಂಗ್ರೆಸ್‍ಗೆ ಬರಲು ತಯಾರಾಗಿದ್ದಾರೆ. 136 ಶಾಸಕರನ್ನು ಹೊಂದಿರುವ ಪ್ರಬಲ ಬಹುಮತ ಇರುವ ಸರ್ಕಾರ ಅಸ್ಥಿರವಾಗಲಿದೆ ಎಂದು ವಿರೋಧ ಪಕ್ಷದವರು ಹೇಳಿದರೆ ನಂಬುತ್ತೀರಾ ಎಂದು ಪ್ರಶ್ನಿಸಿದರು.

ನಾವು ಕಿವಿಯಲ್ಲಿ ಹೂ ಮುಡಿದಿಲ್ಲ. ನಮಗೂ ರಾಜಕೀಯ ಮಾಡಲು ಬರುತ್ತದೆ. ಐದು ವರ್ಷ ನಮ್ಮ ಸರ್ಕಾರ ಸುಭದ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಬಿಜೆಪಿ ಮೈತ್ರಿ ಬಹಳಷ್ಟು ಮಂದಿಗೆ ಇಷ್ಟವಿಲ್ಲ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಉಂಟಾಗಿರುವ ಅಸಮಾಧಾನವನ್ನು ತಣಿಸಲು ಈ ರೀತಿ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಅಭ್ಯರ್ಥಿ ಅಲ್ಲ:
ಮುಂಬರುವ ಲೋಕಸಭೆ ಚುನಾವಣೆಗೆ ನಾನು ಸ್ರ್ಪಧಿಸುವುದಿಲ್ಲ. ನಮ್ಮ ಕುಟುಂಬದಿಂದಲೂ ಯಾರೂ ಸ್ರ್ಪಧಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಲೋಕಸಭೆ ಚುನಾವಣೆಗೆ ಸ್ರ್ಪಧಿಸುವಂತೆ ಪಕ್ಷದ ಹೈಕಮಾಂಡ್ ಕೂಡ ಹೇಳಿಲ್ಲ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕಿಳಿಸುತ್ತೇವೆ ಎಂದರು.

ಜ. 5ರಿಂದ ಮೂರು ದಿನ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಪರ್ಧೆ ಮಾಡುವುದು ಅವರಿಗೆ ಬಿಟ್ಟಿದ್ದು, ಎದುರಾಳಿ ಸ್ಪರ್ಧೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ ನಮ್ಮ ಅಭ್ಯರ್ಥಿ ಗೆಲುವಷ್ಟೇ ಮುಖ್ಯವಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ ಎಂದರು.
ಹಿಂದಿನ ಸರ್ಕಾರದಲ್ಲಿ ಮೂರು ಮಂದಿ ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಭರವಸೆ ನೀಡಿ ಜನರು ಬಹುಮತ ನೀಡಿದ್ದಾರೆ. ಬಿಜೆಪಿ ಜೆಡಿಎಸ್‍ನ್ನು ಜನರು ತಿರಸ್ಕರಿಸಿದ್ದಾರೆ. ಲೋಕಸಭೆ ಚುನಾವಣೆಗೆ ಅವರ ಆಡಳಿತ, ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗಲು ಸಾಧ್ಯವಾಗದೆ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜಕಾರಣ:
ಅಯೋಧ್ಯೆಯ ಶ್ರೀರಾಮ ಮಂದಿರದ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಶ್ರೀರಾಮ, ರಾಮಮಂದಿರ ಎಲ್ಲರಿಗೂ ಸೇರಬೇಕು. ನಾವು ದೇವರು, ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೇವೆ. ಅಭಿವೃದ್ಧಿ ವಿಚಾರಗಳನ್ನು ಚರ್ಚೆ ಮಾಡಲು ಬಯಸುತ್ತೇವೆ ಎಂದರು. ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ಸೂಚಿಸಿದೆಯೇ ಹೊರತು ಯಾವುದೇ ಕೇಸನ್ನು ಹಾಕಿ ಜನರಿಗೆ ತೊಂದರೆ ಕೊಡಿ ಎಂದು ಹೇಳಿಲ್ಲ ಎಂದು ಬಿಜೆಪಿ ಆರೋಪವನ್ನು ನಿರಾಕರಿಸಿದರು.

ಮಾಹಿತಿ ಬಂದಿಲ್ಲ:
ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವರು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೂ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ.

ರಾಷ್ಟ್ರದಲ್ಲೇ ಮೊದಲ ಬಾರಿಗೆ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ತ್ವರಿತವಾಗಿ ಸ್ಪಂದಿಸಿದ ಕೇಂದ್ರ ಅಧ್ಯಯನ ತಂಡ ಕಳುಹಿಸಿತು. ಆ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಿ ವರದಿಯನ್ನೂ ಕೊಟ್ಟಿದೆ. ಆದರೆ ರೀತಿಯ ಸ್ಪಂದನೆಯ ಕೆಲಸ ಆಗಿಲ್ಲ. ಮತ್ತೊಮ್ಮೆ ಮನವಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

RELATED ARTICLES

Latest News