Friday, November 22, 2024
Homeರಾಜ್ಯಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಹಣ ವಸೂಲಿ : ವಂಚಕ ಸೆರೆ

ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಹಣ ವಸೂಲಿ : ವಂಚಕ ಸೆರೆ

ಬೆಂಗಳೂರು,ಜ.2- ಸಿನಿಮಾ ನೋಡಿ ಪ್ರೇರಣೆಗೊಂಡು ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಶ್ರೀನಾಥ ರೆಡ್ಡಿ(34) ಬಂಧಿತ ವಂಚಕ. ಈತ 10ನೇ ತರಗತಿ ವ್ಯಾಸಂಗ ಮಾಡಿದ್ದು, ಆಂಧ್ರಪ್ರದೇಶದಲ್ಲೂ ಸರ್ಕಾರಿ ನೌಕರರಿಗೆ ಇದೇ ರೀತಿ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಅನಾ ಮಧೇಯ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಯೊಬ್ಬರಿಗೆ
ಮೊಬೈಲ್‍ನಿಂದ ಕರೆ ಮಾಡಿ ತಾನು ಲೋಕಾಯುಕ್ತ ಇನ್‍ಸ್ಪೆಕ್ಟರ್ ಚಂದ್ರಶೇಖರ್ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡು, ನಮ್ಮ ಎಡಿಜಿಪಿ ಸಾಹೇಬರು ಮಾತನಾಡುತ್ತಾರೆಂದು ಹೇಳಿ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪಿಟಿಶನ್ ಇರುತ್ತದೆ. ಅದನ್ನು ವಿಚಾರಣೆ ಮಾಡದೆ ಮುಕ್ತಾಯಗೊಳಿಸಬೇಕಾದರೆ ಹಣ ನೀಡಬೇಕಾಗುತ್ತದೆ ಎಂದು ಹೆದರಿಸಿದ್ದಾನೆ.

ನೀವು ಹಣ ಕೊಟ್ಟರೆ ಪಿಟಿಶನ್‍ನ್ನು ನಮ್ಮ ಟೆಕ್ನಿಕಲ್ ಟೀಮ್‍ನಿಂದ ವಿಚಾರಣೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಲಾಗುವುದು ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದನು.

ಈ ಅನಾಮಧೇಯ ವ್ಯಕ್ತಿಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿ ಅನಾಮಧೇಯ ವ್ಯಕ್ತಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ತಾನು ಸಿನಿಮಾದಿಂದ ಪ್ರೇರಣೆಗೊಂಡು ಈ ರೀತಿಯ ಅಪರಾಧ ಕೃತ್ಯಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆಪರೇಷನ್ ಕಮಲಕ್ಕೆ ಒಳಗಾಗುವ ಶಾಸಕರು ಕಾಂಗ್ರೆಸ್‍ನಲ್ಲಿ ಇಲ್ಲ: ಚೆಲುವರಾಯಸ್ವಾಮಿ

ಅಲ್ಲದೆ ಎಡಿಜಿಪಿ ಕೇಶವರಾವ್ ಅವರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡಲು ಪ್ರಯತ್ನಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆರೋಪಿಯು ನಗರದ ಸಿದ್ದಾಪುರ, ಹೈಗ್ರೌಂಡ್ಸ್ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಟೂ ಟೌನ್ ಹಾಗೂ ರಾಜ್ ಮಂಡ್ರಿಯಾದ ತ್ರಿ ಟೌನ್ ಪೊಲೀಸ್ ಠಾಣೆಗಳಲ್ಲಿ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಹಣ ವಸೂಲಿ ಮಾಡಿದ ಪ್ರಕರಣಗಳು ದಾಖಲಾಗಿರುತ್ತವೆ.

ಈತನ ವಿರುದ್ಧ ನಗರದಲ್ಲಿನ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಸೂರ್ಯಸಿಟಿ, ಕೋಲಾರ ಟೌನ್‍ಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿರುತ್ತವೆ. ಈ ಕಾರ್ಯಾಚರಣೆಯನ್ನು ಬೆಂಗಳೂರುನಗರ ಉಪಪೊಲೀಸ್ ಆಯುಕ್ತರು ಅಪರಾಧ-2 ಅವರ ಮಾರ್ಗದರ್ಶನದಲ್ಲಿ ಸಂಘಟಿತ ಅಪರಾಧ ದಳ(ಪೂರ್ವ) ಅಧಿಕಾರಿ ಮತ್ತು ಸಿಬ್ಬಂದಿಗಳು ಬೇಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಮೊಸ ಹೋಗಿದ್ದಲ್ಲಿ ದೂರು ನೀಡಿ:
ಈ ವ್ಯಕ್ತಿಯು 35 ರಿಂದ 40 ಮಂದಿಗೆ ಮೋಸ ಮಾಡಿದ್ದು, ಯಾರಾದರೂ ಈ ಆರೋಪಿಯಿಂದ ವಂಚನೆಗೊಳಗಾಗಿದ್ದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವ್ಯಕ್ತಿಯಿಂದ ವಂಚನೆಗೊಳಗಾದವರ ಪೈಕಿ ಕೆಲವರು ದೂರು ನೀಡಿಲ್ಲ. ಹಾಗಾಗಿ ಮೋಸಕ್ಕೊಳಗಾದವರು ಯಾರಿಗೂ ಹೆದರದೆ ದೂರು ನೀಡುವಂತೆ ಆಯುಕ್ತರು ಅಭಯ ನೀಡಿದ್ದಾರೆ.

RELATED ARTICLES

Latest News