ಬೆಂಗಳೂರು,ಏ.18- ಸುಡುವ ಬಿಸಿಲಿನ ಬೇಗೆಯಿಂದ ಈಗಾಗಲೇ ಕಂಗಾಲಾಗಿರುವ ಕರ್ನಾಟಕದ ಜನರಿಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ ಗ್ಯಾರಂಟಿ ಸರ್ಕಾರ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 56 ಪೈಸೆ ಹೆಚ್ಚಿಸುವ ಅಧಿಕೃತ ಆದೇಶ ಹೊರಡಿಸಿದೆ.
ಈ ಹೆಚ್ಚಳವು ಟ್ರೂ ಅಪ್ ಚಾರ್ಜ್ ಎಂಬ ಹೆಸರಿನಲ್ಲಿ ಜಾರಿಗೆ ಬರಲಿದ್ದು, ಮೇ 1, 2026ರಿಂದ ಗ್ರಾಹಕರ ವಿದ್ಯುತ್ ಬಿಲ್ನಲ್ಲಿ ಅನ್ವಯವಾಗಲಿದೆ.ಕೆಇಆರ್ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ಏರಿಕೆಯನ್ನು 2024-25ರ ಆರ್ಥಿಕ ವರ್ಷದಲ್ಲಿ ಬೆಸ್ಕಾಂಗೆ ಉಂಟಾದ ಆದಾಯದ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಮಾಡಲಾಗಿದೆ.
ಈ ಬೃಹತ್ ಕೊರತೆಯನ್ನು ತುಂಬಿಕೊಳ್ಳಲು ಎಲ್ಲಾ ಎಸ್ಕಾಂಗಳು ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಪ್ರತಿ ಯೂನಿಟ್ಗೆ 56 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲು ಅನುಮತಿ ನೀಡಿದೆ. ತಿಂಗಳಿಗೆ 200 ಯೂನಿಟ್ ಬಳಸುವ ಸಾಮಾನ್ಯ ಮನೆಯ ಬಿಲ್ನಲ್ಲಿ ಕನಿಷ್ಠ 112 ಹೆಚ್ಚುವರಿ ಹೊರೆ ಬೀಳಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೂ ಈ ದರ ಏರಿಕೆ ಅನ್ವಯವಾಗುತ್ತದೆ.
ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ ಇದು ದೊಡ್ಡ ಹಣದ ಹೊರೆಯಾಗುವ ಸಾಧ್ಯತೆ ಇದೆ. ಕೆಇಆರ್ಸಿ ಆದೇಶದಲ್ಲಿ, ಬೆಸ್ಕಾಂ ಮತ್ತು ಇತರ ಎಸ್ಕಾಂಗಳು ಈ ವಸೂಲಾತಿಯನ್ನು ಪ್ರತ್ಯೇಕ ಲೆಕ್ಕಪತ್ರದಲ್ಲಿ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಇತ್ತ, 2024-25ರಲ್ಲಿ ನಿರ್ವಹಣಾ ವೆಚ್ಚಕ್ಕಿಂತ ಹೆಚ್ಚು ಆದಾಯ ಸಂಗ್ರಹ ಮಾಡಿರುವ ಹೆಸ್ಕಾಂ (ಹುಬ್ಬಳ್ಳಿ) ತನ್ನ ಗ್ರಾಹಕರಿಗೆ 2026-27ನೇ ಸಾಲಿನಲ್ಲಿ ಪ್ರತಿ ತಿಂಗಳು ಪ್ರತಿ ಯುನಿಟ್ಗೆ 10 ಪೈಸೆಯಂತೆ ಮರುಪಾವತಿ ಮಾಡಬೇಕು. ಜೆಸ್ಕಾಂ (ಕಲಬುರಗಿ) ಗ್ರಾಹಕರಿಗೆ 10 ಪೈಸೆ, ಮಂಗಳೂರಿನ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಸಹಕಾರ ಸೊಸೈಟಿಯ (ಹೆಚ್ಆರ್ಇಸಿಎಸ್) ಗ್ರಾಹಕರಿಗೆ ಪ್ರತಿ ಯುನಿಟ್ಗೆ ಬರೋಬ್ಬರಿ 155 ಪೈಸೆಯಷ್ಟು ಹಣವನ್ನು ಮರುಪಾವತಿ ಮಾಡಬೇಕು ಎಂದು ಆದೇಶಿಸಿದೆ.
2026-27ನೇ ಸಾಲಿಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಗ್ರಾಹಕರಿಗೆ 15 ಪೈಸೆ ಹೊರೆ ಬಿದ್ದಿದೆ. ಬೆಸ್ಕಾಂ ಹಾಗೂ ಸೆಸ್ಕ್ನ ಗೃಹ ಜ್ಯೋತಿ ಫಲಾನುಭವಿಗಳಿಗೆ ಈ ಹೊರೆ ಬೀಳುವುದಿಲ್ಲ. ಆದರೆ, ಇತರ ಗ್ರಾಹಕರಿಗೆ ದರ ಏರಿಕೆಯ ಹೊರೆ ಆಗಲಿದೆ. ಗೃಹ ಜ್ಯೋತಿ ಗ್ರಾಹಕರ ಪರವಾಗಿ ಈ ಹೆಚ್ಚುವರಿ ದರ ಏರಿಕೆ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಈ ಆದೇಶ 2026 ರ ಮೇ 1ರಿಂದ 2027ರ ಏಪ್ರಿಲ್ 31ರವರೆಗೆ ಬಳಕೆಯಾಗುವ ವಿದ್ಯುತ್ ಬಿಲ್ಗೆ ಅನ್ವಯವಾಗಲಿದೆ.
ಮರುಪಾವತಿ ಹೇಗಿರಲಿದೆ? : ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಸಹಕಾರ ಸೊಸೈಟಿಯ ಗ್ರಾಹಕರಿಗೆ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಅದರ ಪ್ರಕಾರ 2024-25ನೇ ಸಾಲಿನಲ್ಲಿ ಮೆಸ್ಕಾಂನ ಗ್ರಾಹಕನೊಬ್ಬ ಪ್ರತಿ ತಿಂಗಳು ಸರಾಸರಿ 100 ಯುನಿಟ್ ವಿದ್ಯುತ್ ಬಳಕೆ ಮಾಡಿದರೆ, ಕೆಇಆರ್ಸಿ ಆದೇಶದನ್ವಯ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ವಾಪಸ್ ಮಾಡಬೇಕಾಗಿದೆ. ಹೀಗಾಗಿ, 2026-27ನೇ ಸಾಲಿನಲ್ಲಿ ಆ ಗ್ರಾಹಕ ಪ್ರತಿ ತಿಂಗಳು ಬಳಕೆ ಮಾಡುವ 100 ಯುನಿಟ್ಗಳಿಗೆ ಪ್ರತಿ ಯುನಿಟ್ಗೆ ತಲಾ 9 ಪೈಸೆಯಂತೆ ಹಣ ಮರುಪಾವತಿ ಆಗಲಿದೆ. ಇದನ್ನು ವಿದ್ಯುತ್ ಬಿಲ್ನಲ್ಲಿ ಎಫ್ವೈ 25 ಟ್ರೂ ಅಪ್ ಚಾರ್ಜಸ್ ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿ ಲೆಕ್ಕಾಚಾರ ಮಾಡಲಾಗುತ್ತದೆ.
ಬೆಸ್ಕಾಂಗೆ 2,024 ಕೋಟಿ ಆದಾಯ ಕೊರತೆ : 2024-25ನೇ ಸಾಲಿನಲ್ಲಿ ಬೆಸ್ಕಾಂಗೆ 32,019 ಕೋಟಿ ರೂ. ನಿರ್ವಹಣಾ ವೆಚ್ಚ ತಗಲುವ ಆಧಾರದ ಮೇಲೆ ಕೆಇಆರ್ಸಿ ದರ ಪರಿಷ್ಕರಣೆ ಮಾಡಿತ್ತು. ಆದರೆ, 2024-25ನೇ ಸಾಲಿನಲ್ಲಿ ಬೆಸ್ಕಾಂಗೆ 34,087 ಕೋಟಿ ರೂ. ವೆಚ್ಚ ಉಂಟಾಗಿ 2,024 ಕೋಟಿ ರೂ. ಆದಾಯ ಕೊರತೆ ಉಂಟಾಗಿತ್ತು. ಈ ಕೊರತೆಯನ್ನು ತುಂಬಿಕೊಡುವಂತೆ 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿ (ಎಪಿಆರ್) ಆಧಾರದ ಮೇಲೆ ಬೆಸ್ಕಾಂ ಕೆಇಆರ್ಸಿ ಮೊರೆ ಹೋಗಿತ್ತು.
ಇದೀಗ ಕೆಇಆರ್ಸಿಯು ಪ್ರತಿ ಯುನಿಟ್ಗೆ 56 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಿ ನಷ್ಟ ತುಂಬಿಕೊಳ್ಳುವಂತೆ ಆದೇಶ ನೀಡಿದೆ. ಉಳಿದಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ 121.71 ಕೋಟಿ ರೂ. ಆದಾಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಪ್ರತಿ ಯುನಿಟ್ಗೆ 15 ಪೈಸೆ ಹೆಚ್ಚಳ ಮಾಡಲಾಗಿದೆ.
ಆದರೆ, ಮಂಗಳೂರಿನ ಮೆಸ್ಕಾಂ 276.48 ಕೋಟಿ ರೂ. ಉಳಿತಾಯ ದಾಖಲಿಸಿರುವುದರಿಂದ ಪ್ರತಿ ಯುನಿಟ್ಗೆ 9 ಪೈಸೆ ಮರುಪಾವತಿಗೆ ಸೂಚಿಸಲಾಗಿದೆ. ಹೆಸ್ಕಾಂ 133.46 ಕೋಟಿ ರೂ. ಉಳಿತಾಯ ದಾಖಲಿಸಿರುವುದರಿಂದ 10 ಪೈಸೆ, ಜೆಸ್ಕಾಂ 90.40 ಕೋಟಿ ರೂ. ಉಳಿತಾಯ ದಾಖಲಿಸಿರುವುದಕ್ಕೆ 10 ಪೈಸೆ ಮರುಪಾವತಿಗೆ ಆದೇಶಿಸಲಾಗಿದೆ.
ಹೆರ್ಇಸಿಎಸ್ (ಹುಕ್ಕೇರಿ) 381 ಮಿಲಿಯನ್ ಯುನಿಟ್ ವಿದ್ಯುತ್ ಪೂರೈಕೆ ಮಾಡಿದ್ದು, 267.35 ಕೋಟಿ ರೂ. ಖರ್ಚು ಮಾಡಿದೆ. ಇದಕ್ಕಿಂತ ಹೆಚ್ಚು ಆದಾಯ ಗಳಿಸಿರುವ ಹಿನ್ನೆಲೆಯಲ್ಲಿ ಪ್ರತಿ ಯುನಿಟ್ಗೆ 155 ಪೈಸೆಯಂತೆ ಮರುಪಾವತಿ ಮಾಡಲು ಆದೇಶ ಹೊರಡಿಸಲಾಗಿದೆ.
ಹಲವು ದಿನಗಳಿಂದ ವಿದ್ಯುತ್ ದರ ಪರಿಷ್ಕರಣಿಯಾಗಬೇಕೆಂದು ರಾಜ್ಯದ ಐದು ವಿದ್ಯುತ್ ಕಂಪನಿಗಳು ಕೆಇಆರ್ಸಿ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದವು. ವಿದ್ಯುತ್ ಕಂಪನಿಗಳು ನಷ್ಟದಲ್ಲಿರುವ ಕಾರಣ ಪ್ರತಿ ಯೂನಿಟ್ಗೆ ಒಂದು ರೂಪಾಯಿ ಹೆಚ್ಚಳ ಮಾಡಬೇಕೆಂದು ಕೋರಲಾಗಿತ್ತು.
ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ನಷ್ಟದ ಭೀತಿಯಿಂದ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. 2024-25ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಮಾರಾಟದಿಂದ ಆಯೋಗವು ಸುಮಾರು 34,084 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ವಾಸ್ತವದಲ್ಲಿ 32,019 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿದ್ದು, ಸುಮಾರು 2,068 ಕೋಟಿ ರೂಪಾಯಿಗಳಷ್ಟು ಬೃಹತ್ ಆದಾಯದ ಕೊರತೆಯುಂಟಾಗಿದೆ. ಈ ಆರ್ಥಿಕ ಕೊರತೆಯನ್ನು ಸರಿದೂಗಿಸಲು ಗ್ರಾಹಕರಿಂದಲೇ ಹಣ ಸಂಗ್ರಹಿಸಲು ಆಯೋಗವು ಅನುಮತಿ ನೀಡಿತ್ತು.
ಐದು ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಂ) 2024-25ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಆಯೋಗಕ್ಕೆ ಸಲ್ಲಿಸಿದ್ದು ಆದಾಯದಲ್ಲಿ ಸುಮಾರು 4,900 ಕೋಟಿ ಖೋತಾ ಆಗಿರುವುದನ್ನು ಪ್ರಸ್ತಾಪಿಸಲಾಗಿತ್ತು. ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ ಪ್ರಕಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (ಬೆಸ್ಕಾಂ) ಅತಿ ಹೆಚ್ಚು, ಅಂದರೆ 2,802.82 ಕೋಟಿ ಖೋತಾ ಆಗಿದೆ. ಉಳಿದೆಲ್ಲ ಎಸ್ಕಾಂಗಳ ಆದಾಯದಲ್ಲೂ ಎರಡು ಸಾವಿರ ಕೋಟಿಗೂ ಅಧಿಕ ಖೋತಾ ಆಗಿದೆ. ದರ ಪರಿಷ್ಕರಣೆ ಮಾಡದಿದ್ದರೆ ಕಂಪನಿಗಳ ನಿರ್ವಹಣೆ ಕಷ್ಟವಾಗಲಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಲಾಗಿತ್ತು.
