ಬೆಂಗಳೂರು,ಜ.3- ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವಲ್ಲ. ರಾಜಕೀಯಪ್ರೇರಿತ ಕಾರ್ಯಕ್ರಮ. ಧಾರ್ಮಿಕ ಗುರುಗಳಿಂದ ರಾಮನ ಪ್ರತಿಷ್ಠಾಪನೆಯಾಗುತ್ತಿದ್ದರೆ ನಾವು ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದೆವು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳುತ್ತಿರುವುದು ಸಂಪೂರ್ಣ ವೈಯಕ್ತಿಕ ಅಭಿಪ್ರಾಯ. ಇದಕ್ಕೂ , ಪಕ್ಷಕ್ಕೂ ಸಂಬಂಧವಿಲ್ಲ ಎಂದು ಆರಂಭದಲ್ಲೇ ಸ್ಪಷ್ಟಪಡಿಸಿದರು. ನಮಗೆ ತಿಳಿದ ಮಟ್ಟಿಗೆ ರಾಮನ ಪೂಜೆ ಎಂದರೆ ಕೋಸಂಬರಿ ಮತ್ತು ಪಾನಕದ ನೆನಪುಗಳಿವೆ. ಆದರೆ ಈಗ ನಡೆಯುತ್ತಿರುವ ಆಡಂಬರ ಏಕೆ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ಧಾರ್ಮಿಕ ಗುರು ಶಂಕರಾಚಾರ್ಯರು. ಅಂತಹ ಯಾವುದೇ ಧಾರ್ಮಿಕ ಗುರುಗಳಿಂದ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದರೆ ಆಹ್ವಾನ ಇಲ್ಲದೆ ನಾವು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಿತ್ತು. ಆದರೆ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರಿಂದ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಅವರು ಧಾರ್ಮಿಕ ಗುರುಗಳಲ್ಲ. ರಾಜಕೀಯ ನಾಯಕರು. ಮೊದಲಾಗಿ ವಿಶ್ವಗುರು ಮತ್ತು ಅಮಿತ್ ಷಾ ಅವರ ಧರ್ಮ ಯಾವುದು ಎಂಬುದೇ ಸ್ಪಷ್ಟವಾಗಿಲ್ಲ ಎಂದರು.
ರಾಮಮಂದಿರಕ್ಕೆ ಬಿಗಿ ಭದ್ರತೆಗೆ ವಿಶೇಷ ಪೊಲೀಸ್ ಪಡೆ ನಿಯೋಜನೆ
ಅಯೋಧ್ಯೆಯ ಕಾರ್ಯಕ್ರಮದ ನಿಮಿತ್ತ ಉನ್ಮಾದ ಅಗತ್ಯವಿಲ್ಲ. ಸಂಘಟನೆಯ ಪ್ರಮುಖರು ಈಗಾಗಲೇ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿ ಯಾವೆಲ್ಲ ರೀತಿ ಪ್ರಚೋದನೆ ನೀಡಿದ್ದಾರೆ ಎಂಬುದು ತಮಗೆ ದಾಖಲಾತಿ ಸಹಿತ ಮಾಹಿತಿ ಇದೆ. ಒಡಿಶಾದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ನಡೆದ ಸಭೆಯಲ್ಲಿ ಚರ್ಚೆಗಳಾಗಿರುವ ವಿಷಯವನ್ನು ನಾನು ಗಮನಿಸಿದ್ದೇನೆ ಎಂದರು.
ಅಯೋಧ್ಯೆಗೆ ತೆರಳುವವರಿಗೆ ಸೂಕ್ತ ವ್ಯವಸ್ಥೆ ಮತ್ತು ರಕ್ಷಣೆಯನ್ನು ಸರ್ಕಾರ ಮಾಡಿಕೊಡಬೇಕು. ಈ ಹಿಂದೆ ಇಂಥದ್ದೇ ಸಂದರ್ಭದಲ್ಲಿ ಗುಜರಾತಿನ ಗೋದ್ರಾದಲ್ಲಿ ಕರಸೇವಕರ ಸಜೀವ ದಹನವಾಗಿತ್ತು. ಅನಂತರ ಹತ್ಯಾಕಾಂಡಗಳೇ ನಡೆದವು. ಈಗ ಕಟ್ಟೆಚ್ಚರ ವಹಿಸದೆ ಇದ್ದರೆ ಗೋದ್ರಾದಂತಹ ಹತ್ಯಾಕಾಂಡಗಳು ನಡೆಯುವ ಆತಂಕವಿದೆ ಎಂದು ಎಚ್ಚರಿಸಿದರು.
ಹೋರಾಟ ಮಾಡುವುದಾದರೆ ರಾಮ ಮಂದಿರ, ಬಾಬ್ರಿ ಮಸೀದಿಯ ಫಲಾನುಭವಿಗಳು ಮತ್ತು ಅವರ ಮಕ್ಕಳು ಪ್ರತಿಭಟನೆ ನಡೆಸಲಿ. ಪಕ್ಕದ ಮನೆಯ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದು ಬೇಡ. ಅಮಾಯಕರ ಮಕ್ಕಳು ಹೋರಾಟಕ್ಕೆ ಹೋಗಿ ಜೈಲು, ಕೇಸು ಎಂದೆಲ್ಲ ಸಂಕಷ್ಟಕ್ಕೆ ಸಿಲುಕುವುದು ಒಳ್ಳೆಯದಲ್ಲ. ಬೇಕಿದ್ದರೆ ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಈಶ್ವರಪ್ಪ ಅವರಂತಹ ನಾಯಕರು ಮತ್ತು ಅವರ ಮಕ್ಕಳು ಹೋರಾಟ ಮಾಡಿಕೊಳ್ಳಲಿ ಎಂದು ಹೇಳಿದರು.
ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ನಡೆದ ವಾದವನ್ನು ಗಮನಿಸುವುದಾದರೆ ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಗೊತ್ತಾಗುತ್ತದೆ. ಒಂದು ಧಾರ್ಮಿಕ ಸ್ಥಳವನ್ನು ಧ್ವಂಸಗೊಳಿಸಿ ಮತ್ತೊಂದು ಮಂದಿರ ಕಟ್ಟಿದ ಉದಾಹರಣೆ ಇಲ್ಲ.ಸುಪ್ರೀಂಕೋರ್ಟ್ ತೀರ್ಪು ನೀಡುವಾಗ ಬಹುಸಂಖ್ಯಾತರ ಭಾವನೆಗಳನ್ನು ಪರಿಗಣಿಸುವುದಾಗಿ ಹೇಳಿದೆ.
ಹಿಂದೂ ಕಾರ್ಯಕರ್ತರ ಬಂಧನ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮಸೀದಿ ಧ್ವಂಸಗೊಳಿಸುವುದಕ್ಕೆ ಸಂಬಂಧಪಟ್ಟಂತೆ ಎಲ್.ಕೆ.ಅಡ್ವಾಣಿ ಸೇರಿದಂತೆ ಬಹಳಷ್ಟು ಮಂದಿ ಈಗಲೂ ಆರೋಪಿಗಳಾಗಿದ್ದರೆ. ನ್ಯಾಯಾಲಯ ಆರೋಪದಿಂದ ಖುಲಾಸೆ ಮಾಡಿಲ್ಲ. ಮಸೀದಿ ಧ್ವಂಸ ಸರಿ ಎಂದು ಕೂಡ ಹೇಳಿಲ್ಲ. ಅಯೋಧ್ಯೆಯಲ್ಲಿ ದೇವಸ್ಥಾನವಿತ್ತೋ, ಮಸೀದಿ ಇತ್ತೋ ಎಂಬ ಬಗ್ಗೆ ಇನ್ನು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ರಾಮನಿದ್ದಂತೆ ಎಂದು ಮಾಜಿ ಸಚಿವ ಎಚ್.ಆಂಜನೇಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಕೈಲಾಸ್ ಆಶ್ರಮಕ್ಕೂ ಭಕ್ತರಿದ್ದಾರೆ. ಅದೇ ರೀತಿ ಸಿದ್ದರಾಮಯ್ಯನವರಿಗೂ ಕೆಲ ಭಕ್ತರಿದ್ದಾರೆ. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.