ಬೆಂಗಳೂರು, ಮಾ.27- ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಗೋಕರ್ಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸುವುದಕ್ಕೂ ಮುನ್ನಾ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಆತ್ಮಲಿಂಗ ಪೂಜೆ ನೇರವೇರಿಸಿದರು.
ಈ ವೇಳೆ ಅರ್ಚಕರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದರು. ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಜಾರಿ ನಿರ್ದೇಶನದ ಪ್ರಕರಣದಿಂದ ಮುಕ್ತರಾದ ಡಿ.ಕೆ.ಶಿವಕುಮಾರ್ , ದೇವಸ್ಥಾನಗಳ ಭೇಟಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳ ಪ್ರಮುಖ ದೇವಾಲಯಗಳಿಗೆ ನಿನ್ನೆಯಿಂದ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.
ಇಂದು ಗೋಕರ್ಣ ಹಾಗೂ ಕುಮಟಾದ ಗಣೇಶ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ನಂತರ ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ಗೋಕರ್ಣದಲ್ಲಿನ ಪೂಜೆಯ ವೇಳೆಯಲ್ಲಿನ ಸಂಕಲ್ಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅರ್ಚಕರು ಹೇಳುವುದರಲ್ಲಿ ತಪ್ಪೇನಿಲ್ಲ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ನಾಯಕತ್ವದಲ್ಲಿ ನಾವು ಮುಂದೆ ಹೋಗುತ್ತಿದ್ದೇವೆ.
ಕೆಲವರು ನನ್ನನ್ನ ಸಿಎಂ ಆಗಲಿ ಎಂದು ಹೇಳುತ್ತಾರೆ. ಅವರ ಬಾಯಲ್ಲಿ ಬರುವುದನ್ನ ತಪ್ಪಿಸಲು ಸಾಧ್ಯವೇ? ಅರ್ಚಕರು, ಶಿಷ್ಯಂದಿರು, ಹಿತೈಶಿಗಳು ಸೇರಿ ಯಾರು ಏನೇ ಆಸೆ ಪಟ್ಟರೂ ಪಕ್ಷ ಅಂತಿಮವಾಗಿ ತೀರ್ಮಾನಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ ಎಂದರು.ಪೂಜೆಯ ವೇಳೆ ಸಚಿವ ಮಂಕಾಳ ಸುಬ್ಬುವೈದ್ಯ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.