ತಿಪಟೂರು,ಜ.7-ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಹಿಡಿದು ಯುವಕನೊಬ್ಬ ಸಾಹಸ ಮೆರೆದಿರುವ ಘಟನೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಆನಂದ್ ಎಂಬ ಯುವಕನ ಚಾಕಚಕ್ಯತೆ ಮತ್ತು ದೈರ್ಯ, ಸಾಹಸಕ್ಕೆ ಸುತ್ತಮುತ್ತಲಿನ ಇಡೀ ಗ್ರಾಮಸ್ಥರೆಲ್ಲಾ ಖುಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.ಅದನ್ನು ಸರೆ ಹಿಡಿಯಲು ಸತತ ಪ್ರಯತ್ನ ನಡೆದಿತ್ತು.ಈ ನಡುವೆ ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ.
ಕೂಡಲೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು.
ಈ ವೇಳೆ ಅಲ್ಲಿಗೆ ಬಂದ ಆನಂದ ಚಿರತೆ ನೋಡಿ ಹಿಡಿಯಲು ಮುಂದಾಗಿ ಚಲಬಿಡದೆ ಕೊನೆಗೆ ಅದರ ಬಾಲ ಹಿಡಿದು ಬೋನಿಗೆ ಹಾಕಿದ್ದಾನೆ.
ಯುವಕನ ನೋಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಕೊನೆಗೆ ಸುಮಾರು 5 ವರ್ಷದ ಚಿರತೆಯನ್ನು ಹಿಡಿದ ಆನಂದ್ ಅವರ ಸಾಹಸವನ್ನು ಕೊಂಡಾಡಿದ್ದಾರೆ.