ಬೆಂಗಳೂರು, ಮೇ 1- ಮಳೆ ಕೈಕೊಟ್ಟಿದ್ದು, ಕೆರೆ- ಕಟ್ಟೆ- ಹಳ್ಳ- ಕೊಳ್ಳಗಳು ಬತ್ತಿಹೋಗಿವೆ. ಬರಗಾಲದ ಜೊತೆ ಹಿಂದೆಂದೂ ಕಂಡುಕೇಳರಿಯದ ಬಿಸಿಲಿನ ಝಳಕ್ಕೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಸೆಕೆಯಿಂದ ಮುಕ್ತಿ ಪಡೆದುಕೊಳ್ಳಲು ಏರ್‌ಕೂಲರ್, ಏಸಿ ಅಂಗಡಿಗಳತ್ತ ಮುಗಿಬಿದ್ದಿದ್ದಾರೆ.
ಬಿಸಿಲಿನ ತಾಪಕ್ಕೆ ಮನೆಯಿಂದ ಹೊರಬರಲು ಒಂದು ಕ್ಷಣ ಯೋಚಿಸುವಂತಾಗಿದೆ. ಬಿಸಿಲಿನ ಜೊತೆಗೆ ಉಷ್ಣಗಾಳಿಯೂ ಸಹ ಹೆಚ್ಚಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಮನೆಯಲ್ಲೂ ಇರಲಾಗದೆ ಹೊರಗಡೆ ಕೂಡ ಬರಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಕಾಲ ದೂಡುವಂತಾಗಿದೆ.
ಸೆಕೆಯಿಂದ ರಕ್ಷಿಸಿಕೊಳ್ಳಲು ಸೀಲಿಂಗ್ ಫ್ಯಾನ್, ಟೇಬಲ್ ಫ್ಯಾನ್‌ಗಳು 24 ಗಂಟೆಗಳು ಸಹ ಓಡುವಂತಾಗಿವೆ. ಆದರೂ ಕೂಡ ಶಕೆಗೆ ಮುಕ್ತಿ ಸಿಕ್ಕಿಲ್ಲ. ಫ್ಯಾನ್‌ಗಳು ತಿರುಗಿ ತಿರುಗಿ ಬಿಸಿ ಗಾಳಿಯನ್ನು ಹೊರಸೂಸುತ್ತಿವೆ. ಫ್ಯಾನ್ ಗಾಳಿಯಿಂದ ಸೆಕೆಗೆ ಥಣಿಸಿಕೊಳ್ಳಲು ಸಾಧ್ಯವಾಗದೆ ಜನರು ಏಸಿ, ಏರ್‌ಕೂಲರ್‌ಗಳ ಖರೀದಿಯತ್ತ ಮುಖ ಮಾಡಿದ್ದಾರೆ.
ಮಾರುಕಟ್ಟೆಗಳಲ್ಲಿ ನಾನಾ ಕಂಪೆನಿಯ ಹಲವಾರು ಏಸಿ, ಏರ್‌ಕೂಲರ್ ದೊರೆಯುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ 10, 15, 25 ಲೀಟರ್ ಸಾಮರ್ಥ್ಯದ ಏರ್‌ಕೂಲರ್‌ಗಳು ಮಾರಾಟವಾಗುತ್ತಿದ್ದು, ಬೆಲೆಯಲ್ಲಿ ತಲಾ ಒಂದರಿಂದ ಎರಡು ಸಾವಿರ ರೂ. ಏರಿಕೆಯಾಗಿದೆ. ಆನ್‌ಲೈನ್ ಖರೀದಿಯೂ ಕೂಡ ಜೋರಾಗಿ ನಡೆಯುತ್ತಿದೆ.
ಏರ್‌ಕೂಲರ್‌ಗಳಿಗೆ ತಣ್ಣನೆಯ ನೀರು ಹಾಗೂ ಐಸ್ ಕ್ಯೂಬ್‌ಗಳನ್ನು ಹಾಕಿಕೊಂಡರೆ ಸ್ವಲ್ಪ ತಣ್ಣನೆಯ ಗಾಳಿ ಬರುತ್ತದೆ. ನಿದ್ದೆ ಮಾಡಬಹುದು ಎಂದು ಜನರು ಖರೀದಿಗೆ ಮುಂದಾಗಿದ್ದಾರೆ.
ಕೆರೆಕಟ್ಟೆಗಳಲ್ಲಿ ಇರುವ ನೀರು ಕೂಡ ಬಿಸಿಲಿನ ತಾಪಕ್ಕೆ ಹಾವಿಯಾಗುತ್ತಿದ್ದು, ಬೋರ್‌ವೆಲ್‌ಗಳಲ್ಲಿ ಅಂತರ್‌ಜಲ ಮಟ್ಟ ಪಾತಾಳ ತಲುಪಿ ಒಣಗಿ ಹೋಗಿವೆ. ಜನಜಾನುವಾರುಗಳ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ.
ರೈತರಿಗೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ.
ಕೆಲವು ಭಾಗಗಳಲ್ಲಿ ಅಡಿಕೆ ತೋಟಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸುವಂತಾಗಿದೆ.ಒಟ್ಟಿನಲ್ಲಿ ಬಿರು ಬೇಸಿಗೆ ಜನಸಾಮಾನ್ಯರ ಹಾಗೂ ಜಾನುವಾರಗಳನ್ನು ಹೈರಾಣ ವಾಗಿಸಿಬಿಟ್ಟಿದೆ. ಯಾವಾಗ ಮಳೆ ಬರುತ್ತಿದೆಯೋ ಎಂದು ದಿನನಿತ್ಯ ಮುಗಿಲು ನೋಡುವಂತಾಗಿದೆ.