ಮೈಸೂರು,ಸೆ.1- ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಆನೆಗಳಿಗೆ ಭಾರ ಹೊರುವ ತಾಲೀಮು ಇಂದಿನಿಂದ ಆರಂಭಿಸಲಾಗಿದೆ.ದಸರಾ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು 5 ಕಿಲೋಮೀಟರ್ ಹೆಜ್ಜೆ ಹಾಕಲಿದ್ದಾನೆ.
ಈ ಹಿನ್ನೆಲೆಯಲ್ಲಿ ಅಭಿಮನ್ಯು ಸೇರಿದಂತೆ ಇತರೆ ಆನೆಗಳಿಗೆ ಇಂದಿನಿಂದ ಭಾರ ಹೊರುವ ತಾಲೀಮು ಆರಂಭಿಸಲಾಗಿದೆ.ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಶೆಡ್ನಲ್ಲಿ ಇಂದು ಬೆಳಿಗ್ಗೆ 7.30 ಸುಮಾರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಅಭಿಮನ್ಯುವಿನ ಹೆಗಲ ಮೇಲೆ 600 ಕೆ.ಜಿ. ತೂಕದ ಮರಳಿನ ಮೂಟೆಗಳನ್ನು ಹೊರಿಸಿ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಲಾಯಿತು.
ಈ ವೇಳೆ ಗಾಂಭೀರ್ಯದಿಂದಲೇ ಅಭಿಮನ್ಯು ಹೆಜ್ಜೆ ಹಾಕಿದ್ದು, ಜನರು ವೀಕ್ಷಿಸಿದರು. ಉಳಿದ ಆನೆಗಳಿಗೆ ಹಂತಹಂತವಾಗಿ ಭಾರ ಹೊರುವ ತಾಲೀಮು ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಾವುತರು ತಿಳಿಸಿದ್ದಾರೆ.