ಬೆಂಗಳೂರು,ಮಾ.26- ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಯಲು ಬಂದ ಆಟೋ ಚಾಲಕನಿಗೆ ಕಾರಿನಿಂದ ಗುದ್ದಿಸಿ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಿ ಪರಾರಿಯಾಗಿದ್ದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಘುವನಹಳ್ಳಿಯ ನಿವಾಸಿ ಮುನಿಕೃಷ್ಣ(55) ಬಂಧಿತ ಆರೋಪಿ.
ಘಟನೆ ವಿವರ: ಸ್ನೇಹಿತರಾದ ಹರಿಹರದ ನಿವಾಸಿ, ಆಟೋ ಚಾಲಕ ಗೋಪಿ(55) ಮತ್ತು ಮಾಲೂರು ನಿವಾಸಿ ಉಮಾಪತಿ ಎಂಬುವರು ಮಾ.23ರಂದು ರಾತ್ರಿ ವಾಜರಹಳ್ಳಿ100 ಅಡಿ ರಸ್ತೆಯಲ್ಲಿರುವ ಬಾರ್ಗೆ ಮದ್ಯಪಾನ ಮಾಡಲು ಹೋಗಿದ್ದರು.
ಆ ವೇಳೆ ಬಾರ್ಗೆ ಬಂದ ಮುನಿಕೃಷ್ಣನ ಪರಿಚಯವಾಗಿದೆ. ಮೂವರು ಸೇರಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಬಾರ್ನವರು ಸಮಯವಾಗಿದೆ. ಬಾರ್ ಮುಚ್ಚುವುದಾಗಿ ಹೇಳಿದ್ದಾರೆ. ಆಗ ಮುನಿಕೃಷ್ಣ ನನ್ನ ಕಾರಿನಲ್ಲೇ ಕುಳಿತುಕೊಂಡು ಮದ್ಯಪಾನ ಮಾಡೋಣವೆಂದು ಗೋಪಿ ಮತ್ತು ಉಮಾಪತಿ ಅವರನ್ನು ಕರೆದುಕೊಂಡು ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶದ ಬಳಿ ಹೋಗಿದ್ದಾರೆ.
ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಮೂವರು ಮದ್ಯ ಸೇವಿಸುತ್ತಿದ್ದಾಗ ಗೋಪಿ ಮತ್ತು ಸ್ನೇಹಿತ ಉಮಾಪತಿ ನಡುವೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆ ಸಂದರ್ಭದಲ್ಲಿ ಮುನಿಕೃಷ್ಣನಿಗೂ ಬೈದಿದ್ದಾರೆ.
ಇದರಿಂದ ಕೋಪಗೊಂಡ ಮುನಿಕೃಷ್ಣ ನೀವಿಬ್ಬರು ಕಾರಿನಿಂದ ಇಳಿಯಿರಿ ಎಂದು ಇಬ್ಬರನ್ನು ಇಳಿಸಿದಾಗ ಮುನಿಕೃಷ್ಣನಿಗೆ ಗೋಪಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಮುಂದಾಗಿದ್ದಾನೆ. ನಂತರ ಉಮಾಪತಿ ತನ್ನ ಪಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದನು.
ಇತ್ತ ಗೋಪಿ ಸಹ ತನ್ನ ಮನೆಗೆ ನಡೆದು ಹೋಗುತ್ತಿದ್ದಾಗ ಮುನಿಕೃಷ್ಣ ಕಾರು ಚಲಾಯಿಸಿಕೊಂಡು ಹೋಗಿ ಆತನಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದನು.ಈ ಘಟನೆಯನ್ನು ನೋಡಿದ ಉಮಾಪತಿ ಗಾಬರಿಗೊಂಡು ಮನೆಗೆ ಹೋಗಿ ವಿಷ ಸೇವಿಸಿದ್ದಾರೆ. ತಕ್ಷಣ ಕುಟುಂಬದವರು ಗಮನಿಸಿ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಇತ್ತ ತಲಘಟ್ಟಪುರ ಸಂಚಾರಿ ಪೊಲೀಸರಿಗೆ ಅಪಘಾತವಾಗಿರುವ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಹಾಗಾಗಿ ಆ ರಸ್ತೆಯ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಈ ವ್ಯಕ್ತಿಯನ್ನು ಕಾರಿನಿಂದ ಗುದ್ದಿಸಿ ಕೊಲೆ ಮಾಡಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಪ್ರಕರಣವನ್ನು ತಲಘಟ್ಟಪುರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಠಾಣೆಗೆ ವರ್ಗಾವಣೆ ಮಾಡಿದರು.
ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಾಗ ಮೃತ ವ್ಯಕ್ತಿ ಗೋಪಿ ಎಂಬುದು ಗೊತ್ತಾಗಿದೆ. ನಂತರ ತನಿಖೆಯನ್ನು ಮುಂದುವರೆಸಿದಾಗ ಕಾರಿನ ನಂಬರ್ನ್ನು ಪತ್ತೆಹಚ್ಚಿ ಮುನಿಕೃಷ್ಣನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ.
ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತರಾದ ಶಿವಪ್ರಕಾಶ್ ದೇವರಾಜು ಹಾಗೂ ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಗಿರೀಶ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ಈ ಕಾರ್ಯಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.