ಬೆಂಗಳೂರು,ಮೇ 9- ಕಳವು ಮಾಡಿದ ಆಭರಣಗಳನ್ನು ಅಡವಿಟ್ಟು ಬಂದ ಹಣದಿಂದ ಕಾರು ಖರೀದಿಸಿ ಮೋಜು ಮಾಡುತ್ತಿದ್ದ ಹಳೆ ಮನೆಗಳ್ಳನನ್ನು ಸಂಪಂಗಿರಾಮನಗರ ಠಾಣಾ ಪೊಲೀಸರು ಬಂಧಿಸಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿವಸ್ತುಗಳು, ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿ ವಿರುದ್ಧ ಒಟ್ಟು 11 ಪ್ರಕರಣಗಳಿವೆ. ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಈತ ಮತ್ತೆ ಹಳೆ ಚಾಳಿ ಮುಂದುವರೆಸಿದ್ದನು.ಆರೋಪಿಯಿಂದ ಕಳವು ಮಾಲನ್ನು ಸ್ವೀಕರಿಸುತ್ತಿದ್ದ ಚಿನ್ನಬೆಳ್ಳಿ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಒಕ್ಕಲಿಗರ ಭವನದ ಬಳಿಯ ಟೀ ಅಂಗಡಿಯೊಂದರ ಮುಂಭಾಗ ದ್ವಿಚಕ್ರ ವಾಹನದೊಂದಿಗೆ ಅನುಮಾನಸ್ಪದವಾಗಿ ನಿಂತಿದ್ದ ವ್ಯಕ್ತಿಯ ಬಗ್ಗೆ ಪೊಲೀಸರು ವಿಚಾರಿಸಿದಾಗ ದ್ವಿಚಕ್ರ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದಿರುವುದು ಕಂಡುಬಂದಿದೆ.
ಈ ವಾಹನವನ್ನು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿರುವುದಾಗಿ ತಿಳಿಸಿದ್ದು, ವಾಹನದ ಡಿಕ್ಕಿಯನ್ನು ಪರಿಶೀಲಿಸಿದಾಗ ಅದರಲ್ಲಿ ಕಬ್ಬಿಣದ ರಾಡು, ಕಟ್ಟರ್, ಸ್ಕ್ರೂ ಡ್ರೈವರ್ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸಹಚರನೊಂದಿಗೆ ಸೇರಿಕೊಂಡು ಬ್ಯಾಡರಹಳ್ಳಿಯ ಎರಡು ಮನೆಗಳಲ್ಲಿ ಈ ಆಯುಧಗಳನ್ನು ಬಳಸಿ ಚಿನ್ನಾಭರಣ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಬ್ಯಾಡರಹಳ್ಳಿಯ ಭರತ್‌ನಗರದ ಮನೆಯೊಂದರ ಮೊದಲ ಮಹಡಿ ಹಾಗೂ ಎರಡನೇ ಮಹಡಿ ಮನೆಗಳಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವುದಲ್ಲದೆ ಚಂದ್ರ ಲೇಔಟ್‌ನಲ್ಲಿ ಒಂದು ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಹೇಳಿದ್ದಾನೆ.
ಕಳವು ಮಾಡಿದ ಚಿನ್ನಾಭರಣಗಳನ್ನು ತುಮಕೂರಿನ ಚಿನ್ನ ಬೆಳ್ಳಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಮಾರಾಟ ಮಾಡಿ ಬಂದ ಹಣದಿಂದ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಈತನ ಮಾಹಿತಿ ಮೇರೆಗೆ ಚಿನ್ನಾಭರಣಗಳನ್ನು ಸ್ವೀಕರಿಸುತ್ತಿದ್ದ ಚಿನ್ನ ಬೆಳ್ಳಿ ಕೆಲಸಗಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಭರಣಗಳನ್ನು ಚಿನ್ನದ ಗಟ್ಟಿಯನ್ನಾಗಿ ಮಾಡಿ 70 ಗ್ರಾಂ ಚಿನ್ನದ ಗಟ್ಟಿಯನ್ನು ತನ್ನ ಬಳಿಯಲ್ಲಿಟ್ಟುಕೊಂಡು 314 ಗ್ರಾಂ ಚಿನ್ನದ ಗಟ್ಟಿಯನ್ನು ತುಮಕೂರಿನಲ್ಲಿರುವ ಜ್ಯೂವೆಲ್ಲರಿ ವರ್ಕ್ಸ್ ಅಂಗಡಿಯಲ್ಲಿ
ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ಆರೋಪಿ ಆಭರಣಗಳನ್ನು ಮಾರಿ ಖರೀದಿಸಿದ್ದ ಕಾರಿನ ಬಗ್ಗೆ ವಿಚಾರಿಸಿ, ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆ ಮುಂಭಾಗದ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಪರಿಶೀಲಿಸಿ ಅದರಲ್ಲಿದ್ದ 107.63 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಚಿನ್ನದಂತಿರುವ 78.13 ಗ್ರಾಂ ರೋಲ್‌್ಡಗೋಲ್‌್ಡ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನ ಜ್ಯೂವೆಲ್ಲರಿ ವರ್ಕ್‌್ಸ ಅಂಗಡಿ ಮಾಲೀಕನಿಂದ 200 ಗ್ರಾಂ 3 ಚಿನ್ನದ ಗಟ್ಟಿಗಳನ್ನು ಹಾಗೂ 114 ಗ್ರಾಂ 2 ಚಿನ್ನದ ಗಟ್ಟಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಲ್ಲದೆ, ತುಮಕೂರಿನ ಚಿನ್ನಬೆಳ್ಳಿ ಕೆಲಸ ಮಾಡುವ ವ್ಯಕ್ತಿಯ ಪತ್ನಿಯು 70 ಗ್ರಾಂ ಚಿನ್ನದ ಗಟ್ಟಿಯನ್ನು ಠಾಣೆಗೆ ತಂದು ಒಪ್ಪಿಸಿದ್ದಾರೆ.
ಒಟ್ಟಾರೆ ಈ ಪ್ರಕರಣದಲ್ಲಿ ಒಟ್ಟು 384 ಗ್ರಾಂ ಚಿನ್ನಾಭರಣಗಳು, 107.63 ಗ್ರಾಂ ಬೆಳ್ಳಿ ವಸ್ತುಗಳು, ಒಂದು ಕಾರು, 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 40 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿ ಬಂಧನದಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ 2 ಮನೆಕಳವು ಪ್ರಕರಣ, ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳವು ಪ್ರಕರಣ ಹಾಗೂ ಚಂದ್ರ ಲೇಔಟ್ ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಸೇರಿ ಒಟ್ಟು 4 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇನ್‌ಸ್ಪೆಕ್ಟರ್ ರವಿಕಿರಣ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದ್ದಾರೆ.