ಬೆಳಗಾವಿ, ಡಿ.12- ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಯಂತ್ರಿಸಲು ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕರಾದ ಸಿ.ಕೆ.ರಾಮಮೂರ್ತಿ ಅವರ ತಡೆಹಿಡಿಯಲಾದ ಪ್ರಶ್ನೆ ಇಂದು ಸದನದಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.
ಬೆಂಗಳೂರಿನಲ್ಲಿ ಇತ್ತೀಚೆಗೆ ಹುಕ್ಕಾಬಾರ್ಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ದೆಹಲಿಯ ನಂತರ ಅತೀ ಹೆಚ್ಚು ಹುಕ್ಕಾಬಾರ್ಗಳ ಸಂಖ್ಯೆ ಬೆಂಗಳೂರಿನಲ್ಲಿ ಇದೆ ಎಂದು ಆಕ್ಷೇಪಿಸಿದರು.ಬಿಜೆಪಿ ಶಾಸಕ ಸುರೇಶ್ಕುಮಾರ್ ಮಧ್ಯಪ್ರವೇಶಿಸಿ ಪಂಜಾಬ್, ಗುಜರಾತ್, ರಾಜಸ್ಥಾನ, ಉತ್ತರಾಖಾಂಡ್, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಹುಕ್ಕಾಬಾರ್ಗಳನ್ನು ನಿಷೇಸಲಾಗಿದೆ. ಹುಕ್ಕಾಬಾರ್ಗಳಲ್ಲಿನ ಧೂಮಪಾನ, ಸಿಗರೇಟ್ ಸೇವನೆಗಿಂತಲೂ ಇನ್ನೂರು ಪಟ್ಟು ಹೆಚ್ಚು ಹಾನಿಕರ. ಹೀಗಾಗಿ ಸಂಪೂರ್ಣ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಅರವಿಂದ್ ಬೆಲ್ಲದ್ ಮಾತನಾಡಿ, ಪಂಜಾಬಿನಲ್ಲಿ ತಮ್ಮ ಮಕ್ಕಳು ಅಮಲಿಗೆ ಸಿಲುಕಬಾರದು ಎಂಬ ಕಾರಣಕ್ಕೆ 15, 16 ವರ್ಷಕ್ಕೆ ರಾಜ್ಯದಿಂದ ಹೊರಗೆ ಕಳುಹಿಸುತ್ತಿದ್ದಾರೆ. ಹುಕ್ಕಾಬಾರ್ಗಳು ಮಾದಕವಸ್ತುವಿನ ಆರಂಭಿಕ ಹಂತ. ಇದನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ಹೊಸ ವರ್ಷಕ್ಕೆ ಸಂಗ್ರಹಿಸಿದ್ದ 21ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಗೃಹಸಚಿವ ಡಾ.ಜಿ.ಪರಮೇಶ್ವರ್, ಬೆಂಗಳೂರು ಹಾಗೂ ಬೇರೆ ಪ್ರದೇಶಗಳಲ್ಲಿ ಹುಕ್ಕಾಬಾರ್ಗಳ ಪ್ರಮಾಣ ಹೆಚ್ಚಾಗಿದೆ. ದೊಡ್ಡ ಪೈಪ್ನಲ್ಲಿ ಬೇರೆ ಬೇರೆ ರೀತಿಯ ಫ್ಲೇವರ್ಗಳನ್ನು ಸೇರಿಸಿ ಧೂಮಪಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇವುಗಳಿಗೆ ಬಿಬಿಎಂಪಿ ಟ್ರೇಡ್ ಲೈಸೆನ್ಸ್ ನೀಡುತ್ತಿಲ್ಲ. ಹುಕ್ಕಾಬಾರ್ಗಳ ಮಾಲಿಕರು 2022 ರಿಂದಲೂ ರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಾಕಾರ (ಫುಡ್ ಸೇಫ್ಟಿ ಅಥಾರಿಟಿ ಆಫ್ ಇಂಡಿಯಾ) ದಿಂದ ಅನುಮತಿ ಪಡೆದು ಹುಕ್ಕಾಬಾರ್ಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ನ್ಯಾಯಾಲಯ ಈ ಕುರಿತು ತೀರ್ಪು ನೀಡಿದ್ದು, ಕಾಫಿ ಬಾರ್, ಟೀ ಬಾರ್ನಂತಹ ವಾಣಿಜ್ಯ ಪ್ರದೇಶಗಳಲ್ಲೇ ಪ್ರತ್ಯೇಕವಾದ ಜಾಗ ಮೀಸಲಿರಿಸಿ ಹುಕ್ಕಾಬಾರ್ ನಡೆಸಬಹುದು ಎಂದು ತಿಳಿಸಿದರು.
ನಿಯಮಗಳನ್ನು ಪಾಲನೆ ಮಾಡದೇ ಇದ್ದ ವೇಳೆ ದೂರು ಬಂದರೆ ಪೊಲೀಸರು ಸ್ಥಳ ಪರಿಶೀಲನೆ ಮಾಡಲು ಅವಕಾಶವಿದೆ. ಆದರೆ ಹುಕ್ಕಾಬಾರ್ಗಳ ಮೇಲೆ ನಿಯಂತ್ರಣ ಸಾಸಲು ನಮಗೆ ಅವಕಾಶಗಳಿಲ್ಲವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಕಳೆದ ಅಕ್ಟೋಬರ್ 19 ರಂದು ಕೋರಮಂಗಲದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಅದರಲ್ಲಿ ಮೂರನೇ ಮಹಡಿಯಲ್ಲಿ 14 ಗ್ಯಾಸ್ ಸಿಲಿಂಡರ್ಗಳನ್ನು ಇರಿಸಲಾಗಿತ್ತು. ಬೆಂಕಿ ಅನಾಹುತ ಸಂಭವಿಸಿದಾಗ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಕೆಲವರಿಗೆ ಗಾಯಗಳಾಗಿವೆ.
ವ್ಯಕ್ತಿಯೊಬ್ಬರು ಮೂರನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಆತ ಮರದ ಮೇಲೆ ಬಿದ್ದಿರುವುದರಿಂದ ಅವರು ಪವಾಡದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಕ್ಕಾಬಾರ್ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯುವಕರ ಭವಿಷ್ಯದ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಪ್ರತ್ಯೇಕ ಕಾನೂನು ರೂಪಿಸಲಾಗುವುದು ಎಂದು ಹೇಳಿದರು. ಈ ಹಿಂದೆ 4 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹುಕ್ಕಾಬಾರ್ಗಳನ್ನು ನಿಷೇಸಿದ್ದರೆ ಇಂದು ಸಮಸ್ಯೆಯೇ ಇರುತ್ತಿರಲಿಲ್ಲ. ನನ್ನ ಬಗ್ಗೆ ನಿಷೇಧ ಸಮಸ್ಯೆಗೆ ಪರಿಹಾರ ಅಲ್ಲ. ಅದನ್ನು ನಿಯಂತ್ರಣ ಮಾಡುವುದು ಸೂಕ್ತ ಎಂದರು.
20 ಕೋಟಿ ರೂ. ಮೌಲ್ಯದ ಡ್ರಗ್ ವಶ :
ಮಾದಕವಸ್ತುಗಳು ಹಾಗೂ ಹುಕ್ಕಾಬಾರ್ಗಳ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಪೊಲೀಸರು ಸಾಮಾಜಿಕವಾದ ಈ ಪಿಡುಗುಗಳ ವಿರುದ್ಧ ನಿರಂತರವಾದ ಕಾರ್ಯಾಚರಣೆ ನಡೆಸುತ್ತಲೇ ಬಂದಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ 20 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನೈಜೀರಿಯಾ ಮೂಲದ ವ್ಯಕ್ತಿಯೊಬ್ಬ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ದಾಸ್ತಾನು ಮಾಡಿಕೊಂಡಿದ್ದ. ಪೊಲೀಸರು ಕ್ರಮ ಕೈಗೊಂಡು 20 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ಕಳೆದ 4 ವರ್ಷಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ 102 ಪ್ರಕರಣಗಳನ್ನು ದಾಖಲಿಸಲಾಗಿದೆ. 2020 ರಲ್ಲಿ 14, 2021 ರಲ್ಲಿ 25, 2022 ರಲ್ಲಿ 38, 2023 ರಲ್ಲಿ 25 ಪ್ರಕರಣಗಳು ದಾಖಲಾಗಿವೆ ಎಂದು ವಿವರಣೆ ನೀಡಿದರು.