Tuesday, April 30, 2024
Homeರಾಜ್ಯವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ

ಬೆಳಗಾವಿ, ಡಿ.12- ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ರಾಜ್ಯಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಭರ ವಸೆ ನೀಡಿದ್ದಾರೆ.ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ವಿ.ಸುನಿಲ್ಕುಮಾರ್ ಅವರು ಘಟನೆಯನ್ನು ಖಂಡಿಸಿದರು.

ನಮ್ಮ ರಾಜ್ಯದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣಗಳು ನಡೆದಿರಲಿಲ್ಲ. ಇತ್ತೀಚೆಗೆ ಜನರಿಗೆ ಪೊಲೀಸರ ಮೇಲಿನ ಭಯ ಕಡಿಮೆಯಾಗಿದೆ. ಅದಕ್ಕಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರ ಆರೋಪಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ ಜಿಲ್ಲೆ ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಕಾಂಗ್ರೆಸ್ನ ಅಶೋಕ್ ಪಟ್ಟಣ್ ಅವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.ಇದಕ್ಕೆ ಉತ್ತರ ನೀಡಿದ ಸಚಿವ ಡಾ.ಜಿ.ಪರಮೇಶ್ವರ್, ಸದಸ್ಯರಿಗೆ ಲಿಖಿತ ಉತ್ತರವನ್ನು ಕಳುಹಿಸಿಕೊಡುತ್ತೇನೆ. ಆದರೆ ಸದ್ಯಕ್ಕೆ ಸದಸ್ಯರ ಪ್ರಸ್ತಾಪಕ್ಕೆ ಮೌಖಿಕ ಮಾಹಿತಿ ನೀಡುವುದಾಗಿ ತಿಳಿಸಿದರು.

ಮೊನ್ನೆ ರಾತ್ರಿ 12.30 ರ ಸುಮಾರಿಗೆ ಬೆಳಗಾವಿಯಿಂದ 15 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ ಘಟನೆ ನಡೆದಿದೆ. ಅಶೋಕ್ ಗಟ್ಕರಿ 24 ವರ್ಷದ ಯುವಕ ಪ್ರಿಯಾಂಕ ಎಂಬುವರನ್ನು ಪ್ರೀತಿಸಿದ್ದಾರೆ. ಮದುವೆಗೆ ಕುಟುಂಬಗಳಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಮೊನ್ನೆ 12.30 ಕ್ಕೆ ಅವರಿಬ್ಬರೂ ಓಡಿಹೋಗಿದ್ದಾರೆ.

ಹೊಸ ವರ್ಷಕ್ಕೆ ಸಂಗ್ರಹಿಸಿದ್ದ 21ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಪ್ರಿಯಾಂಕ ಕುಟುಂಬದ 15 ರಿಂದ 20 ಜನರು ಹುಡುಗನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿರುವ ಯುವಕನ ತಾಯಿ 55 ವರ್ಷದ ಕಮಲಮ್ಮ ಒಂಟಿಯಾಗಿದ್ದರು. ಆಕೆಯ ಪತಿ ಚಾಲಕರಾಗಿದ್ದು, ಮಹಾರಾಷ್ಟ್ರದಲ್ಲಿದ್ದಾರೆ. ಇವರೆಲ್ಲರೂ ಮಹಿಳೆಯನ್ನು ಹೊರಗೆಳೆದುಕೊಂಡು ಬಂದು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿ ಮಹಿಳೆಗೆ ಬಟ್ಟೆ ಕೊಟ್ಟು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾನು ಆಸ್ಪತ್ರೆಗೆ ಹಾಗೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಮಾನವೀಯವಾಗಿ ನಡೆಸಿಕೊಂಡವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇದರ ಜೊತೆಗೆ ಓಡಿ ಹೋಗಿರುವ ಆ ಇಬ್ಬರನ್ನೂ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಯಿಂದ ಆಘಾತಕ್ಕೊಳಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಾಳಜಿ ವಹಿಸಿದ್ದೇನೆ ಎಂದರು.

ಪ್ರೀತಿ, ಪ್ರೇಮ ಸಹಜವಾದ ಪ್ರಕ್ರಿಯೆಗಳು. ಇಷ್ಟವಾದವರನ್ನು ಮದುವೆಯಾಗಲು ಹಲವು ಸಂದರ್ಭಗಳಲ್ಲಿ ಕುಟುಂಬದವರು ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ವಿರೋಧಗಳಿರುತ್ತವೆ. ಮರ್ಯಾದೆಯ ಹೆಸರಿನಲ್ಲಿ ಸ್ವಂತ ಮಗಳನ್ನೇ ಕತ್ತರಿಸಿ ಹಾಕಿರುವ ಪ್ರಕರಣಗಳೂ ಇವೆ. ಸಮಾಜದ ಮನಸ್ಥಿತಿ ಬದಲಾಗಬೇಕು. ಪೊಲೀಸರು, ಕಾನೂನಿನಿಂದಲೇ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮಹಿಳೆ ಮೇಲೆ ದೌರ್ಜನ್ಯ : ಕಠಿಣ ಕ್ರಮಕ್ಕೆ ಆಗ್ರಹ
ಬೆಳಗಾವಿ,ಡಿ.12 – ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಖಂಡನೀಯ. ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.

ಮಾಧ್ಯಮ ಪ್ರತಿನಿಗಳ ಜೊತೆ ಮಾತನಾಡಿದ ಅವರು, ವಂಟಮೂರಿಯ ಘಟನೆ ಬಗ್ಗೆ ನಾವು ಪ್ರತಿಯೊಬ್ಬರೂ ತಲೆತಗ್ಗಿಸುವಂತೆ ಮಾಡಿದೆ. ನಾಗರಿಕ ಸಮಾಜದಲ್ಲಿ ಈ ರೀತಿ ಅಮಾನವೀಯವಾಗಿ ಆ ತಾಯಿಯನ್ನು ಗಂಟೆಗಟ್ಟಲೆ ಕಟ್ಟಿಹಾಕಿ ಇಂಥ ಘಟನೆ ನಡೆದುದು ಖಂಡನಾರ್ಹ ಎಂದರು.

ಇಂಥ ಘಟನೆ ಪುನರಾವರ್ತನೆ ಆಗಬಾರದು. ದೇಶದ ಜನರ ಮುಂದೆ ತಲೆತಗ್ಗಿಸುವಂಥ ಇಂಥ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಮತ್ತು ಗೃಹ ಸಚಿವರು, ಪೊಲೀಸ್ ಇಲಾಖೆಗೆ ಸ್ಪಷ್ಟ ಸಂದೇಶ ಕೊಡಬೇಕು ಎಂದು ಅವರು ಮನವಿ ಮಾಡಿದರು. ಈ ರೀತಿಯ ಘಟನೆ ಕುರಿತು ಯಾರೂ ಯೋಚಿಸದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

RELATED ARTICLES

Latest News