ಬೆಂಗಳೂರು,ಜು.9- ತಮಗೆ ಜೈಲಿನ ಊಟ ಸೇರುತ್ತಿಲ್ಲವಾದ ಕಾರಣ ಮನೆಯೂಟ ನೀಡಲು ಅನುಮತಿ ಕೊಡಬೇಕೆಂದು ಕೋರಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿ ಹಾಗೂ ಚಿತ್ರನಟ ದರ್ಶನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನನಗೆ ಜೈಲಿನ ಊಟ ಸೇವಿಸಿದರೆ ಅಲರ್ಜಿ ಉಂಟಾಗುತ್ತಿದೆ. ಕಳೆದ ವಾರದಿಂದ ನನಗೆ ಪರಪ್ಪನ ಅಗ್ರಹಾರದಲ್ಲಿ ಜೈಲಿನ ಅಧಿಕಾರಿಗಳು ನೀಡುತ್ತಿರುವ ಊಟ ಸೇರುತ್ತಿಲ್ಲ. ಹೀಗಾಗಿ ಮನೆಯೂಟ ನೀಡಲು ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿಕೊಂಡಿದ್ದಾರೆ.
ನಾನು ಜೈಲಿನ ಊಟ ಸರಿಯಿಲ್ಲ ಎಂದು ಇಲ್ಲವೇ ಆ ಊಟಕ್ಕೆ ಅಗೌರವ ತೋರಿಸುತ್ತಿಲ್ಲ. ನನ್ನ ದೇಹಕ್ಕೆ ಒಗ್ಗುತ್ತಿಲ್ಲವಾದ್ದರಿಂದ ವೈದ್ಯರ ಸೂಚನೆ ಮೇರೆಗೆ ಮನೆಯೂಟ ಮಾಡಬೇಕು. ನ್ಯಾಯಾಲಯ ನನ್ನ ಮನವಿಯನ್ನು ಪರಿಗಣಿಸಬೇಕೆಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಊಟದ ಜೊತೆಗೆ ಮನೆಯಿಂದ ಹಾಸಿಗೆ, ದಿಂಬು, ಬ್ರೆಷ್, ಟೂನ್‌ಪೇಸ್ಟ್, ಸೋಪು ಹಾಗೂ ಬಟ್ಟೆಗಳನ್ನು ಬಳಸಲು ಅವಕಾಶ ನೀಡಬೇಕು, ನ್ಯಾಯಾಲಯವು ನನ್ನ ಮನವಿಯನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವನ್ನು ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.
ಇದೀಗ ನ್ಯಾಯಾಲಯ ದರ್ಶನ್ ಅವರ ಮನವಿಯನ್ನು ಪರಿಗಣಿಸುತ್ತದೆಯೇ ಎಂಬುದು ಕುತೂಹಲಕಾರಿ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಒಟ್ಟು 17 ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿತು. ಆಪ್ತ ಗೆಳೆತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಇನ್‌ಸ್ಟ್ರಾಗ್ರಾಮ್‌ನಲ್ಲಿ ಅಶ್ಲೀಲ ಮೆಸೇಜ್ ಮಾಡಿದ ಎಂಬ ಕಾರಣಕ್ಕಾಗಿ ದರ್ಶನ್ ಹಾಗು ಇತರೆ ಆರೋಪಿಗಳು ಬರ್ಭರವಾಗಿ ಕೊಲೆ ಮಾಡಿ ಮೃತದೇಹವನ್ನು ಕಾಮಾಕ್ಷಿಪಾಳ್ಯದ ರಾಜಕಾಲುವೆ ಬಳಿ ಇರುವ ಮೋರಿಗೆ ಎಸೆದಿದ್ದರು.