ಬೆಂಗಳೂರು,ಏ.16- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಟ ಪ್ರಕಾಶ್ ರೈ ಉರುಫ್ ಪ್ರಕಾಶ್‍ರಾಜ್ ಎಂಬ ಕಲಾವಿದ ದಾರಿ ತಪ್ಪಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಪ್ರಕಾಶ್‍ರಾಜ್ ದಾರಿ ತಪ್ಪಿರುವುದಕ್ಕೆ ಸಾಕ್ಷ್ಯವಿದೆ. ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರ್ಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ? ಎಂದು ಪ್ರಕಾಶ್ ರಾಜ್ ಅವರನ್ನು ಪ್ರಶ್ನಿಸಿದೆ.
ಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ, ಸರ್ಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೆಯ ಆಹಾರವಿಲ್ಲ, ನೀರೂ ಇಲ್ಲ. ಸರ್ಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. ಈಚೆಗಷ್ಟೇ ನೀವು ಸ್ಥಾಪಿಸಿದ ನಿರ್ದಿಗಂತಕ್ಕೆ ಹಣದ ಹೊಳೆ ಸರ್ಕಾರ ಹರಿಸುತ್ತಿದೆ. ನಿಮ್ಮ ಜೋಳಿಗೆ ಭರ್ತಿ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿಫ್ರಂಟ್ ಎಂಬ ಮಟ್ಟು-ಪಟ್ಟಿನ ಕಂಪನಿಗೆ ಕೋಟಿ ಕೋಟಿ ಸುರಿದಿರುವ ಕಾಂಗ್ರೆಸ್ ಸರ್ಕಾರ, ನಿಮ್ಮ ನಿರ್ದಿಗಂತಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕøತಿ ಇಲಾಖೆಯಲ್ಲಿ ಕಸ ಹೊಡೆಯುವವರು ದಿಕ್ಕಿಲ್ಲ, ಕನ್ನಡ ಭವನದಲ್ಲಿ ಧೂಳು ಕೊಡವುವರು ಗತಿ ಇಲ್ಲ. ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ ಹೇಗೆ? ಎಂದು ಪ್ರಶ್ನಿಸಿದೆ.