Thursday, May 2, 2024
Homeರಾಜಕೀಯಈಶ್ವರಪ್ಪನವರ ಮೇಲೆ ನೇತಾಡುತ್ತಿದೆ ಉಚ್ಚಾಟನೆ ತೂಗುಗತ್ತಿ

ಈಶ್ವರಪ್ಪನವರ ಮೇಲೆ ನೇತಾಡುತ್ತಿದೆ ಉಚ್ಚಾಟನೆ ತೂಗುಗತ್ತಿ

ಬೆಂಗಳೂರು,ಏ.16- ಪಕ್ಷದ ವರಿಷ್ಠರಿಗೂ ಬಗ್ಗದೆ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮೇಲೆ ಉಚ್ಛಾಟನೆಯ ತೂಗುಗತ್ತಿ ಎದುರಾಗಿದೆ. ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಈಶ್ವರಪ್ಪ ಅವರಿಗೆ ನಾಮಪತ್ರ ಹಿಂಪಡೆಯಲು ಇದೇ ತಿಂಗಳ 28ರವರೆಗೆ ಕಾಲಾವಕಾಶ ನೀಡಲಾಗಿದೆ.

ಒಂದು ವೇಳೆ 28ರ ಒಳಗೆ ಈಶ್ವರಪ್ಪ ತಮ್ಮ ನಾಮಪತ್ರವನ್ನು ಹಿಂಪಡೆಯದೇ ಕಣದಲ್ಲಿ ಉಳಿದಿದ್ದೇಯಾದರೆ ಅದನ್ನು ಅಶಿಸ್ತು ಎಂದು ಪರಿಗಣಿಸುವ ಬಿಜೆಪಿ ನಾಯಕರು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಿದೆ ಎಂದು ತಿಳಿದುಬಂದಿದೆ. ಸದ್ಯ ಅವರನ್ನು ರಾಜ್ಯ ಮತ್ತು ಕೇಂದ್ರ ನಾಯಕರು ಮನವೊಲಿಸುವ ಕೆಲಸವನ್ನು ಕೆಗೆತ್ತಿಕೊಂಡಿದ್ದು ಆದಷ್ಟು ಏಕಾಂಗಿ ಮಾಡುವ ರಣತಂತ್ರವನ್ನು ಹೆಣೆದಿದ್ದಾರೆ.

ಅವರ ಹಿಂದೆಮುಂದೆ ಪಕ್ಷದ ಮುಖಂಡರು, ಕಾರ್ಯಕರ್ತರು ಸುಳಿದಾಡದಂತೆ ಎಚ್ಚರ ವಹಿಸಿರುವ ಬಿಜೆಪಿ ನಾಯಕರು ಕೊನೆಯದಾಗಿ ಉಚ್ಛಾಟನೆಯ ಅಸ್ತ್ರ ಬಳಸುವ ಸಾಧ್ಯತೆ ಇದೆ.ನಾಮಪತ್ರ ಹಿಂಪಡೆಯುವಂತೆ ಈಶ್ವರಪ್ಪ ಆಪ್ತರ ಮೂಲಕ ಸೂಚನೆ ನೀಡಲಾಗಿತ್ತು. ಆದರೆ ಈಗಾಗಲೇ ಬಹುದೂರ ಸಾಗಿರುವ ಅವರು ಬ್ರಹ್ಮ ಬಂದು ಹೇಳಿದರೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ.

ಒಂದು ಕಡೆ ಪ್ರಧಾನಿ ನರೇಂದ್ರಮೋದಿ ಮತ್ತು ಸಂಘ ಪರಿವಾರದ ನಾಯಕರನ್ನು ಹೊಗಳುತ್ತಾ ಮತ್ತೊಂದು ಕಡೆ ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ವಾಚಾಮಗೋಚರವಾಗಿ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ನಾಯಕರು 22ರ ನಂತರ ಅವರ ವಿರುದ್ಧ ಬ್ರಹ್ಮಾಸ್ತ್ರ ಬಳಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ತಮ್ಮ ಪುತ್ರ ಕೆಇ ಕಾಂತೇಶ್ ಗೆ ಹಾವೇರಿ ಲೋಕಸಭೆ ಕ್ಷೇತ್ರದ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದು ಇದೀಗ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬಿಎಸ್‍ವೈ ಕುಟುಂಬದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂದು ಪಣತೊಟ್ಟಿರುವ ಈಶ್ವರಪ್ಪ ಕಳೆದ ವಾರ ತಮ್ಮ ನಾಮಪತ್ರವನ್ನೂ ಸಲ್ಲಿಕೆ ಮಾಡಿದ್ದರು. ಇದರ ಬೆನ್ನಲ್ಲೇ ಬಿ.ವೈ.ರಾಘವೇಂದ್ರ ಮುಂದಿನ ದಿನಗಳಲ್ಲಿ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಹಿಂದೆ ಈಶ್ವರಪ್ಪರಿಗೆ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಶ್ವರಪ್ಪರ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬೇಸರದಿಂದ ಹಿಂದುಗಿರಿದ್ದ ಈಶ್ವರಪ್ಪ ಶಿವಮೊಗ್ಗದಿಂದ ಸ್ಪರ್ಧಿಸೇ ತೀರುತ್ತೇನೆ ಎಂದು ಹಠ ತೊಟ್ಟಿದ್ದಾರೆ.

ಇನ್ನು ಬಿಜೆಪಿ ಹೈಕಮಾಂಡ್ ಈಶ್ವರಪ್ಪನವರ ಮನವೊಲಿಸುವ ಕೆಲಸವನ್ನುಕೈಬಿಟ್ಟಿದೆ. ಅಲ್ಲದೆ ಕಾದುನೋಡುವ ತಂತ್ರ ಅನುಸರಿಸುತ್ತಿದ್ದು ಏಪ್ರಿಲ್ 22ರೊಳಗೆ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯದಿದ್ದರೆ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಕ್ರಮಕ್ಕೆ ಹೈಕಮಾಂಡ್ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈಶ್ವರಪ್ಪನವರು ನಾಮಪತ್ರ ವಾಪಸ್ ಪಡೆಯದಿದ್ದರೆ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದರು.

RELATED ARTICLES

Latest News