Sunday, October 13, 2024
Homeಇದೀಗ ಬಂದ ಸುದ್ದಿ20 ದಿನಗಳ ನಂತರ ಹೊಳೆನರಸೀಪುರಕ್ಕೆ ತೆರಳಿದ ಎಚ್‌.ಡಿ.ರೇವಣ್ಣ

20 ದಿನಗಳ ನಂತರ ಹೊಳೆನರಸೀಪುರಕ್ಕೆ ತೆರಳಿದ ಎಚ್‌.ಡಿ.ರೇವಣ್ಣ

ಹಾಸನ, ಮೇ 21- ಮಹಿಳೆ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಪಡೆದು ನಿರಾಳರಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಇಂದು ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ತೆರಳಿದ್ದಾರೆ.

ಬರೋಬ್ಬರಿ 20 ದಿನಗಳ ನಂತರ ಅವರು ತಮ್ಮ ತವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ತಮ್ಮ ಕುಟುಂಬದ ಆರಾಧ್ಯ ದೈವ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ, ಕುಲದೈವ ಹರದನಹಳ್ಳಿಯ ದೇವೇಶ್ವರ ಹಾಗೂ ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ನಂತರ ರೇವಣ್ಣ ಅವರು ಹೊಳೆನರಸೀಪುರಕ್ಕೆ ಹೋಗದೇ ಬೆಂಗಳೂರಿನಲ್ಲಿರುವ ತಂದೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಮನೆಯಲ್ಲೇ ಉಳಿದುಕೊಂಡಿದ್ದರು.

ಇದೀಗ ಎರಡೂ ಪ್ರಕರಣದಲ್ಲೂ ಜಾಮೀನು ಪಡೆದಿರುವ ಹಿನ್ನೆಲೆಯಲ್ಲಿ ಅವರು ಮನೆ ದೇವರಿಗೆ ಪೂಜೆ ಸಲ್ಲಿಸಲು ದೇವೇಗೌಡರಿಂದ ಅನುಮತಿ ಪಡೆದಿರುವ ರೇವಣ್ಣ ಅವರು ಹೊಳೆನರಸೀಪುರಕ್ಕೆ ತೆರಳಿದರು. ದೇವರ ದರ್ಶನದ ವೇಳೆ ಎಲ್ಲಿಯೂ ಕೂಡ ಏನನ್ನೂ ಮಾತನಾಡದಂತೆ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸ್ವಾಗತಕ್ಕೆ ಸಿದ್ಧತೆ:
ಹಾಸನ ಜಿಲ್ಲೆಯ ಗಡಿಭಾಗ ಕಿರಿಸಾವೆಯಲ್ಲಿ ರೇವಣ್ಣಗೆ ಸ್ವಾಗತ ಕೋರಲು ಜೆಡಿಎಸ್‌‍ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಆದರೆ ಯಾರೂ ಸಹ ಹಾರ, ತುರಾಯಿ ಹಾಕುವುದು ಬೇಡ ಎಂದು ರೇವಣ್ಣ ಅವರು ಪಕ್ಷದ ಶಾಸಕರಿಗೆ, ಮುಖಂಡರಿಗೆ ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Latest News