ನವದೆಹಲಿ,ಆ.23- ಪ್ರಧಾನಿ ನರೇಂದ್ರಮೋದಿ ನಂತರ ಮುಂದಿನ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಬಿಜೆಪಿ ಪಾಳೆಯದದಲ್ಲಿ ಸದ್ಯಕ್ಕೆ ಉತ್ತರ ಇಲ್ಲ. ಅಮಿತ್ ಶಾ, ಯೋಗಿ ಅದಿತ್ಯನಾಥ್ ಹೆಸರು ಮುಂಚೂಣಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಿಟ್ಟಿನಲ್ಲಿ ವಾಹಿನಿಯೊಂದು ಸಮೀಕ್ಷೆ ನಡೆಸಿ ಉತ್ತರ ಕಂಡುಕೊಳ್ಳುವ ಕೆಲಸ ಮಾಡಿದೆ.
543 ಲೋಕಸಭಾ ಕ್ಷೇತ್ರಗಳಲ್ಲಿ 40,591 ಜನರನ್ನು ಸಂದರ್ಶಿಸಿ ಮೂಡ್ ಆಫ್ ನೇಷನ್ ಸಮೀಕ್ಷೆ ಕೈಗೊಂಡಿದೆ. ಸದ್ಯ ಮೋದಿ ಕ್ಯಾಬಿನೆಟ್ನಲ್ಲಿ ನಂಬರ್ 2 ಆಗಿರುವ ಗೃಹ ಸಚಿವ ಅಮಿತ್ ಶಾ ಅವರು ಉತ್ತರಾಧಿಕಾರಿಯಾಗಲು ಸೂಕ್ತ ವ್ಯಕ್ತಿ ಎಂದು ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇದ್ದರೆ, ಮೂರನೇ ಸ್ಥಾನದಲ್ಲಿ ಭೂ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅನುಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.
ಯಾರಿಗೆ ಎಷ್ಟು ಒಲವು?:
ಅಮಿತ್ ಶಾ ಶೇ.25, ಯೋಗಿ ಅದಿತ್ಯನಾಥ್ ಶೇ.19, ಗಡ್ಕರಿ ಶೇ.13 ಜನ ಬೆಂಬಲಿಸಿದ್ದಾರೆ. ರಾಜನಾಥ್ ಸಿಂಗ್ ಮತ್ತು ಶಿವರಾಜ್ ಚೌಹಾಣ್ ಅವರಿಗೆ ಶೇ.5ರಷ್ಟು ಜನ ಬೆಂಬಲ ನೀಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಮುಂದಿನ ಸೆಪ್ಟೆಂಬರ್ನಲ್ಲಿ 75 ವರ್ಷ ತುಂಬುತ್ತದೆ. 75 ವರ್ಷ ಮೀರಿದವರು ಅಧಿ ಕಾರದಲ್ಲಿ ಇರಬಾರದು. ಅವರು ಕಿರಿಯರಿಗೆ ಅವಕಾಶ ನೀಡಬೇಕು. 75 ವರ್ಷ ಮೀರಿದವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾನದಂಡವನ್ನು ಬಿಜೆಪಿ ಹಿಂದೆ ಹಾಕಿಕೊಂಡಿತ್ತು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಮಾನದಂಡ ವಿಫಲವಾದ ಬೆನ್ನಲ್ಲೇ ನಂತರದ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಹಂಚಿಕೆಗೆ ಈ ನಿಯಮಗಳು ಅನ್ವಯವಾಗಲಿಲ್ಲ.
ಮೋದಿ ಅವರು ಗುಜರಾತ್ನಲ್ಲಿ 200ರಿಂದ 2014 ರವರೆಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. 2012ರ ವಿಧಾನಸಭಾ ಚುನಾವಣೆ ಮೋದಿ ಅವರಿಗೆ ನಿರ್ಣಯಕವಾಗಿತ್ತು. ಈ ಚುನಾವಣೆ ಗೆದ್ದ ಬಳಿಕ ಮೋದಿ ಅವರ ಹೆಸರು ರಾಷ್ಟ್ರ ರಾಜಕಾರಣಕ್ಕೆ ಬಂದಿತ್ತು.
ಯೋಗಿ ಅದಿತ್ಯನಾಥ್ ಅವರು ಸತತ ಎರಡು ಬಾರಿ ಉತ್ತರ ಪ್ರದೇಶ ಚುನಾವಣೆ ಗೆದ್ದಿದ್ದಾರೆ. 2027ರಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಲೋಕಸಭಾ ಚುನಾವಣೆ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 2027ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಯೋಗಿ ಅದಿತ್ಯನಾಥ್ ಅವರು ವರ್ಚಸ್ಸು ವೃದ್ಧಿಯಾಗುವ ಸಾಧ್ಯತೆಯಿದೆ.