Thursday, November 21, 2024
Homeಬೆಂಗಳೂರುಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದುವರಿದ ಜಿಟಿಜಿಟಿ ಮಳೆ, ಜನರು ಹೈರಾಣ

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದುವರಿದ ಜಿಟಿಜಿಟಿ ಮಳೆ, ಜನರು ಹೈರಾಣ

After two-day break, rains back in Bengaluru, part of the city flooded again

ಬೆಂಗಳೂರು,ಅ.20- ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ತತ್ತರಗೊಂಡಿದೆ.ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಜಡಿ ಮಳೆ ಆರಂಭಗೊಂಡಿದ್ದು, ಮಳೆಯ ಆರ್ಭಟಕ್ಕೆ ಹೊಲಗದ್ದೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಹಾವೇರಿ, ದಾವಣಗೆರೆ, ರಾಮನಗರ, ಮಂಡ್ಯ, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಬೀದರ್‌, ಗದಗ, ಚಾಮರಾಜನಗರ, ಕೊಪ್ಪಳ, ಉತ್ತರಕನ್ನಡ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಹಲವೆಡೆ ಮಳೆಯ ಆರ್ಭಟ ಜೋರಾಗಿ ಬೆಳೆಹಾನಿ ಸಂಭವಿಸಿದೆ.

ಬೆಂಗಳೂರು, ಉಡುಪಿ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ಹೈಟೆಕ್‌ ಸಿಟಿ ಬೆಂಗಳೂರು ಹೈರಾಣ :
ಸಿಲಿಕಾನ್‌ ಸಿಟಿಯಲ್ಲಿ ನಿನ್ನೆಯಿಂದ ವರುಣ ಅಬ್ಬರಿಸುತ್ತಿದ್ದಾನೆ. ಮಳೆಯ ಅಬ್ಬರಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಸ್ತೆಗಳು ಜಲಾವೃತಗೊಂಡಿವೆ. ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ ಹಲವೆಡೆ ಟ್ರಾಫಿಕ್‌ ಜಾಮ್‌ ಆಗಿ ವಾಹನ ಸವಾರರು ಪರದಾಡುವಂತಾಗಿದೆ.
ಮೈಸೂರು ರಸ್ತೆ, ಆರ್‌.ವಿ.ಕಾಲೇಜು, ಜಯರಾಂದಾಸ್‌‍, ಕೆಂಗೇರಿ ರಸ್ತೆಗೆ ನೀರು ನುಗ್ಗಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಭಾರಿ ಮಳೆಯ ಪರಿಣಾಮ ವರ್ತೂರು-ಗುಂಜೂರು ರಸ್ತೆ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.ಸಿಲ್‌್ಕಬೋರ್ಡ್‌ ಜಂಕ್ಷನ್‌ ನೀರಿನಲ್ಲಿ ಮುಳುಗಡೆಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಯಿತು. ಸರ್ಜಾಪುರ, ನಾಗನಾಥಪುರ ರಸ್ತೆಯಲ್ಲೆಲ್ಲಾ ನೀರು ತುಂಬಿ ವಾಹನ ಸವಾರರು ಪರದಾಡಿದರು. ಇನ್ನೂ ಕೆ.ಎಸ್‌‍.ಲೇಔಟ್‌, ಸಾಯಿ ಲೇ ಔಟ್‌ನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಯಿತು.

ಕಾರು ಶೋ ರೂಂಗೂ ನೀರು ಹರಿದು ಶೋ ರೂಂನಲ್ಲಿದ್ದ ಕಾರುಗಳಿಗೂ ಹಾನಿಯಾಗಿದೆ. ಭಾರಿ ಮಳೆಯ ಪರಿಣಾಮ ಕೊಮಘಟ್ಟದ ಸಮೀಪ ಶೆಡ್‌ಗೆ ನೀರು ಹರಿದಿದೆ. ಅದೃಷ್ಟವಶಾತ್‌ ಅಲ್ಲಿ ವಾಸವಾಗಿದ್ದ 9 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಜೊತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಮತ್ತು 20 ಡಿಗ್ರಿ ದಾಖಲಾಗಲಿದೆ.

ಹಬ್ಬದ ಖರೀದಿ ಸಂಭ್ರಮಕ್ಕೆ ಅಡ್ಡಿ
ದೀಪಾವಳಿ ಹಬ್ಬದ ತಯಾರಿಯಲ್ಲಿರುವ ಜನರಿಗೆ ವಾರಾಂತ್ಯದ ಮಳೆ ಬೇಸರ ತಂದಿದೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಬರುತ್ತಿದ್ದರು. ಆದರೆ ಮಳೆರಾಯನಿಂದಾಗಿ ಖರೀದಿ ಮಾಡಲಾಗಿಲ್ಲ.ನಗರದ ಮೆಜೆಸ್ಟಿಕ್‌, ಜಯನಗರ, ವಿಜಯನಗರ, ಶಾಂತಿನಗರ, ಸುಂಕದಕಟ್ಟೆ, ರಾಜಾಜಿನಗರ, ಕೆಆರ್‌ ಮಾರುಕಟ್ಟೆ, ಗಾಂಧಿ ಬಜಾರ್‌, ರಾಜರಾಜೇಶ್ವರಿ ನಗರ, ಉತ್ತರಹಳ್ಳಿ, ಶ್ರೀನಿವಾಸ ನಗರ, ಜಾಲಹಳ್ಳಿ, ಕೋರಮಂಗಲ ಮತ್ತಿತರ ಕಡೆ ಮಳೆ ಧಾರಾಕಾರವಾಗಿ ಮಳೆ ಸುರಿದಿದೆ.

ಮಳೆ ಅರ್ಭಟಕ್ಕೆ ಅಲ್ಲಲ್ಲಿ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಸಂಜೆ ವೇಳೆಗೂ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ನಿಂತಿದೆ. ಆನೇಕಲ್‌‍, ಜಿಗಣಿ, ಬನ್ನೇರುಘಟ್ಟ ಚಂದಾಪುರ ಹಲವೆಡೆ ರಸ್ತೆಯಲ್ಲಿಯೇ ಮಳೆ ನೀರು ನಿಂತಿದ್ದರಿಂದ ಪಾದಚಾರಿಗಳು ಪರದಾಡುವಂತಾಗಿತ್ತು.

ಹಬ್ಬದ ತಯಾರಿಯಲ್ಲಿರುವ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ. ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಹಾಗೂ ಹೂವು ಹಣ್ಣು ವ್ಯಾಪಾರ ಮಾಡುವ ವ್ಯಾಪಾರಿಗಳು ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಯಿಂದಾಗಿ ವ್ಯಾಪಾರ ಮಂಕಾಗುವ ಸಾಧ್ಯತೆಯಿರುವುದರಿಂದ ಚಿಂತೆಗೀಡಾಗಿದ್ದಾರೆ.

ವಿಮಾನ ಹಾರಾಟದಲ್ಲಿ ವ್ಯತ್ಯಯ
ನಿನ್ನೆ ರಾತ್ರಿ ಹಾಗೂ ಇಂದು ಬೆಳಿಗ್ಗೆ ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆಯಾದ ಪರಿಣಾಮ ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಕಂಡುಬಂದಿತ್ತು. ಹಲವು ವಿಮಾನಗಳ ಸಮಯ ಬದಲಾವಣೆ ಮಾಡಲಾಗಿತ್ತು. ನಿನ್ನೆ ರಾತ್ರಿ ಹಾಗೂ ಇಂದು ಬೆಳಿಗ್ಗೆ ಯಲಹಂಕ ಫ್ಲೈ ಓವರ್‌ ಟ್ರಾಫಿಕ್‌ ಜಾಂ ಆಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

ಮರಗಳು ಧರೆಗೆ
ರಾಜಾಜಿನಗರದ ಶಿವನಹಳ್ಳಿ ಸಿಗ್ನಲ್‌ ಬಳಿ ರಸ್ತೆಗೆ ಅಡ್ಡಲಾಗಿ ಮರದ ರೆಂಬೆಕೊಂಬೆಗಳು ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ಪಾಲಿಕೆ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಿದರು.

RELATED ARTICLES

Latest News