ನಾಗಮಂಗಲ: ಕೃಷಿ ಕ್ಷೇತ್ರದಲ್ಲಿ ವ್ಯಕ್ತವಾಗುವ ಆವಿಷ್ಕಾರಗಳ ಫಲ ರೈತರಿಗೆ ತಲುಪಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಮತ್ತು ಜಿಲ್ಲಾ ಪಂಚಾಯಿತಿ ಮಂಡ್ಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳ ಮತ್ತು ರೈತ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೇ.70 ರಷ್ಟು ಜನರು ಕೃಷಿ ಅವಲಂಬಿತರ ದೇಶ ನಮ್ಮದಾಗಿದೆ, ಬಹುಸಂಖ್ಯೆಯಲ್ಲಿ ಕೃಷಿ ಅವಲಂಭಿಸಿರುವ ರೈತರು ಸಧೃಡರಾಗಬೇಕು, ಆಗ ಕುಟುಂಬ, ಜಿಲ್ಲೆ, ರಾಜ್ಯ ಮತ್ತು ದೇಶ ಸದೃಢವಾಗುತ್ತದೆ ಎಂದರು. ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಕೃಷಿ ಕ್ಷೇತ್ರ ಹಾಗೂ ಪರಿಸರದ ಬಗ್ಗೆ ಅನನ್ಯ ಪ್ರೀತಿ ಹೊಂದಿದ್ದರು, ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಮಲಾನಂದನಾಥ ಶ್ರೀಗಳು ಕೃಷಿ ಕ್ಷೇತ್ರ ಬಲವರ್ಧನೆಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಪ್ರತಿ ವರ್ಷ ಕೃಷಿಮೇಳ, ರೈತ ಸಂಗಮ ಮತ್ತತರ ಕೃಷಿ ಪೂರಕ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಬೆಂಗಳೂರಿನಲ್ಲಿ 3 ದಿನಗಳ ಕಾಲ ಅಂತರಾಷ್ಠೀಯ ಮಟ್ಟದ ಸಿರಿಧಾನ್ಯ ಮೇಳ ಆಯೋಜಿಸಲಾಗಿತ್ತು, ಆ ಮೂಲಕ 150 ಕೋಟಿಗೂ ಮಿಗಿಲಾದ ಸಿರಿಧಾನ್ಯ ರಫ್ತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 50ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು, 300ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಲಕ್ಷಾಂತರ ಜನತೆಯಲ್ಲಿ ಸಾವಯವ ಆಹಾರ ಧಾನ್ಯಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಹೆಣ್ಣು ಮಕ್ಕಳು ಕುಟುಂಬದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಜಾಣ್ಮೆ ಹೊಂದಿದ್ದಾರೆ, ಅದಕ್ಕೆ ಪೂರಕವಾಗಿ ಸರ್ಕಾರಗಳು ಹೆಣ್ಣು ಮಕ್ಕಳನ್ನು ಪ್ರಬಲರಾಗಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ, ಹೈನುಗಾರಿಕೆ ಹಾಗೂ ಕೃಷಿ ಕಾಯಕದಲ್ಲಿ ಮಹಿಳೆಯರ ಪಾತ್ರ ಅಧಿಕವಾಗಿದೆ ಎಂದು ಗುಣಗಾನ ಮಾಡಿದರು.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಹೆಚ್ಚು ಲಾಭಗಳಿಸಬಹುದಾಗಿದೆ, ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಸಹಾಯಧನ ಹಾಗೂ ಪ್ರೋತ್ಸಾಹಧನಕ್ಕೆ ಹೆಚ್ಚು ಅನುದಾನ ಬಳಕೆ ಮಾಡುತ್ತಿದೆ ಎಂದು ತಿಳಿಸಿದರು. ಕಳೆದ ಸಾಲಿನಲ್ಲಿ ಸುಮಾರು 475 ಕೋಟಿ ರೂ. ಬೆಳೆ ವಿಮೆ ರೈತರ ಖಾತೆಗೆ ಜಮೆ ಆಗಿದೆ. ಬರಗಾಲದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ 1 ಸಾವಿರ ಕೋಟಿ ಬೆಳೆ ವಿಮೆ ಹಣ ರೈತರಿಗೆ ಸೇರುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಹಳೆ ಮೈಸೂರು ಭಾಗದ ರೈತರು ತಮ್ಮ ಜಮೀನುಗಳನ್ನು ಇಳುವರಿ ಭರಿತ ಜಮೀನುಗಳನ್ನಾಗಿ ಪರಿವರ್ತಿಸಿ ಅಧಿಕ ಇಳುವರಿಯ ಕಬ್ಬಿನ ಫಸಲು ಬೆಳೆಯುವ ಬೆಳೆ ತಾಂತ್ರಿಕತೆಯ ವಿನಿಮಯಕ್ಕಾಗಿ ಉತ್ತಕ ಕರ್ನಾಟಕ ಭಾಗಕ್ಕೆ ಅಧ್ಯಯನ ಪ್ರವಾಸ ಆಯೋಜಿಸಲಾಗುವುದು ಎಂದು ತಿಳಿಸಿದರು. ಪ್ರತಿಯೊಂದು ಕೃಷಿಕರ ಕುಟುಂಬವು ಸಮಗ್ರ ಕೃಷಿಗೆ ಒತ್ತು ನೀಡಬೇಕು, ಇತರೆ ವೃತ್ತಿಯೊಂದಿಗೆ ಕೃಷಿಯನ್ನು ಪೋಷಿಸುವ ಹೊಣೆಗಾರಿಕೆ ಹೊಂದಬೇಕೆಂದು ತಿಳಿಸಿದರು.
ರಾಜ್ಯ ಕೃಷಿ ಆಯುಕ್ತಾಲಯದ ಆಯಕ್ತ ವೈ.ಎಸ್.ಪಾಟೀಲ್ ಮಾತನಾಡಿ, ಶಿಕ್ಷಣ, ಆರೋಗ್ಯ, ಧಾರ್ಮಿಕ ಸೇವೆಯ ಜೊತೆಗೆ ರೈತ ಸಂಗಮ ಆಯೋಜಿಸುವ ಮೂಲಕ ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗದ ಸಮ್ಮಿಲನಕ್ಕೆ ವೇದಿಕೆ ಸೃಷ್ಠಿಸಿ, ಕೃಷಿ ಚಟುವಟಿಕೆಗಳ ವಿಲೀನಕ್ಕೆ ನಾಂದಿಯಾಡಿರುವ ಶ್ರೀಗಳ ದೂರದೃಷ್ಟಿಯನ್ನು ಬಣ್ಣಿಸಿದರು.
ಜನರಿಗೆ ಹತ್ತಿರವಾಗುವ ಯೋಜನೆ ನೀಡುವ ಯೋಗ್ಯತೆ ಬಿಜೆಪಿಗಿಲ್ಲ : ಸಚಿವ ಮಧು ಬಂಗಾರಪ್ಪ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಸ್ವಾಮೀಜಿ ವಹಿಸಿದ್ದರು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಜಿಕೆವಿಕೆ ಕುಲಪತಿ ಡಾ.ಎಸ್.ಬಿ.ಸುರೇಶ್, ಕೃಷಿ ಇಲಾಖೆಗೆ ನಿರ್ದೇಶಕ ಜಿ.ವಿ.ಪುತ್ರ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಂ.ಎಚ್.ಪದ್ಮನಾಭ್, ವೈಭವ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಕುಮಾರ ಸರ್ವರನ್ನು ಸ್ವಾಗತಿಸಿ, ರೈತರು ದೇಶದ ಆಧಾನ ಸ್ಥಂಭ ಹಾಗೂ ಶಕ್ತಿಯಾಗಿದ್ದು, ರೈತ ಮತ್ತು ಕೃಷಿ ಕ್ಷೇತ್ರವನ್ನು ಉತ್ತೇಜಿಸಬೇಕಾದ ಹೊಣೆಗಾರಿಕೆ ನಮ್ಮಲ್ಲರದ್ದಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸಿಫ್, ಎಸ್ಪಿ ಎನ್.ಯತೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ನಿರ್ದೇಶಕಿಯರಾದ ಡಾ.ಮಾಲತಿ,ಮಮತ ಇತರರರು ಉಪಸ್ಥಿತರಿದ್ದರು