ಬೆಂಗಳೂರು,ಮಾ.2- ಕೃಷಿ ಇಲಾಖೆಯಲ್ಲಿ ಖಾಲಿ ಇರುವ 100 ಕೃಷಿ ಅಧಿಕಾರಿಗಳು, 680 ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ 750 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 10 ತಿಂಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳ ಕುರಿತು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು.
ಆರ್ಥಿಕ ಇಲಾಖೆ ಈ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ನೀಡಿದ್ದು ಇನ್ನು ಒಂದು ವಾರದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಲೋಕಸೇವಾ ಆಯೋಗಕ್ಕೆ ಕಳುಹಿಸಲಾಗುವುದು. ಮೊದಲ ಹಂತದಲ್ಲಿ ಈ ಹುದ್ದೆಗಳ ನೇಮಕಾತಿ ಆಗುತ್ತಿದ್ದು, ಇನ್ನೆರಡುಮೂರು ವರ್ಷದಲ್ಲಿ ಖಾಲಿ ಇರುವ ಸುಮಾರು 2700 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸುಮಾರು 20 ವರ್ಷದಿಂದ ಬಾಕಿ ಉಳಿದಿದ್ದ ಮುಂಬಡ್ತಿಯನ್ನು ನೀಡಲಾಗಿದೆ. 292 ಸಹಾಯಕ ಕೃಷಿ ನಿರ್ದೇಶಕರು, 253 ಕೃಷಿ ಅಧಿಕಾರಿಗಳು, 33 ಸಿಬ್ಬಂದಿ ಸೇರಿದಂತೆ ಒಟ್ಟು 582 ಮಂದಿಗೆ ಮುಂಬಡ್ತಿ ನೀಡಲಾಗಿದೆ ಎಂದು ಹೇಳಿದರು.
ಐದು ವರ್ಷದಿಂದ ನಿಲ್ಲಿಸಲಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು ಆರಂಭಿಸಲಾಗಿದ್ದು, 10 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಕೃಷಿ ಯಾಂತ್ರಿಕತೆಯಲ್ಲಿ ಪ್ರೋತ್ಸಾಹ ನೀಡಲು 63 ಸಾವಿರ ಫಲಾನುಭವಿಗಳಿಗೆ 284.92 ಕೋಟಿ ರೂ. ಸಹಾಯಧನ ನೀಡಲಾಗಿದೆ. 2.34 ಲಕ್ಷ ಫಲಾನುಭವಿಗಳಿಗೆ ಸೂಕ್ಷ್ಮ ನೀರಾವರಿ ಘಟಕ ಅಳವಡಿಕೆ 484 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು. ರೈತ ಕರೆ ಕೇಂದ್ರದಲ್ಲಿ ಏಕರೂಪ ಸಂಖ್ಯೆಯನ್ನು ಸ್ಥಾಪಿಸಲಾಗಿದೆ. ತೊಗರಿ ಬೇಳೆಯ ನಶೆರೋಗಕ್ಕೆ ಪರಿಹಾರವಾಗಿ 2.98 ಲಕ್ಷ ರೈತರಿಗೆ 223 ಕೋಟಿ ರೂ. ಪರಿಹಾರ ನೀಡಿದ್ದು, ಕೆ-ಕಿಸಾನ್ ತಂತ್ರಾಂಶದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ನಕಲಿ ಆಗುವುದನ್ನು ತಪ್ಪಿಸಲಾಗಿದೆ ಎಂದು ಹೇಳಿದರು.
ಈ ವರ್ಷ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿಚಾರದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಮುಂದಿನ ವರ್ಷವೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉತ್ತಮ ಮಳೆ: ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹೆಚ್ಚುವರಿ 297 ಕೋಟಿ ರೂ. ಅನುದಾನವನ್ನು ಪಡೆಯಲಾಗಿದೆ ಎಂದು ತಿಳಿಸಿದರು.
ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ 25 ಲಕ್ಷ ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದು, ಈಗಾಗಲೇ 600 ಕೋಟಿ ರೂ. ಪಾವತಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ 800 ಕೋಟಿ ರೂ. ಪಾವತಿಸಲಿದ್ದು, ಒಟ್ಟು 1400 ಕೋಟಿ ರೂ. ಬೆಳೆ ವಿಮೆ ಪಾವತಿ ಮಾಡಿದಂತಾಗಿದೆ. ಕೇಂದ್ರ ಸರ್ಕಾರ ಭರ ಪರಿಹಾರ ನೀಡುವಲ್ಲಿ ಉದಾಸೀನ ಮಾಡಿದ್ದರೂ ರಾಜ್ಯ ಸರ್ಕಾರ 2000 ರೂ. ಪರಿಹಾರ ನೀಡುತ್ತಿದೆ ಎಂದು ಹೇಳಿದರು.
ಜಲಾನಯನ ಅಭಿವೃದ್ಧಿ ಇಲಾಖೆಯಲ್ಲೂ 73.77 ಲಕ್ಷ ಹೆಕ್ಟೇರ್ ಪ್ರದೇಶಗಳನ್ನು ಉಪಚರಿಸಲಾಗಿದೆ. ಮನ್ರೇಗಾ ಸೇರಿದಂತೆ 881.16 ಕೋಟಿ ರೂ. ಕಾರ್ಯಕ್ರಮ, 9398 ನೀರು ಸಂಗ್ರಹಣ ವಿನ್ಯಾಸ 1,07,059 ಸುಧಾರಣೆ ಮಾಡಲಾಗಿದೆ. 585.90 ಕೋಟಿ ರೂ. ವೆಚ್ಚವಾಗಿದೆ ಎಂದು ಅಂಕಿ ಅಂಶಗಳ ಸಾಧನೆಯ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಪುತ್ರ, ಜಲಾನಯನ ಅಭಿವೃದ್ಧಿ ಆಯುಕ್ತ ಗಿರೀಶ್, ನಿರ್ದೇಶಕ ಶ್ರೀನಿವಾಸ್, ಕೆಫೆಕ್ ವ್ಯವಸ್ಥಾಪಕ ನಿರ್ದೇಶಕ ಪಂಥನಾಳ್ ಉಪಸ್ಥಿತರಿದ್ದರು.