ನವದೆಹಲಿ,ಜು.15- ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹೇಳಿದೆ.
ಈ ಸಂಬಂಧ ತನ್ನ ಕಾರ್ಯಕಾರಿ ಸಮಿತಿಯ ಸಭೆ ನಡೆಸಿರುವ ಎಐಎಂಪಿಎಲ್‌ಬಿ, ಮುಸ್ಲಿಂ ಮಹಿಳೆಯರ ಜೀವನಾಂಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇಸ್ಲಾಮಿಕ್ ಕಾನೂನಿಗೆ (ಷರಿಯಾ) ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಈ ನಿರ್ಧಾರವನ್ನು ರದ್ದುಗೊಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಅನ್ವೇಷಿಸಲು ಅದರ ಅಧ್ಯಕ್ಷರಿಗೆ ಅಧಿಕಾರ ನೀಡಿದೆ. ಇದರೊಂದಿಗೆ ಉತ್ತರಾಖಂಡದಲ್ಲಿ ಜಾರಿಯಾಗಿರುವ ಏಕರೂಪದ ನಾಗರಿಕ ಸಂಹಿತೆ ಕಾಯ್ದೆಯನ್ನು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಮಂಡಳಿ ನಿರ್ಧರಿಸಿದೆ.
ವಿಚ್ಛೇದನವು ಅತ್ಯಂತ ಅಸಹ್ಯಕರ ಎಂದು ಪವಿತ್ರ ಪ್ರವಾದಿ ಉಲ್ಲೇಖಿಸಿದ್ದಾರೆ. ಆದ್ದರಿಂದ ವಿವಾಹವನ್ನು ಮುಂದುವರಿಸುವುದು ಉತ್ತಮ. ಹೀಗಿದ್ದರೂ ವೈವಾಹಿಕ ಜೀವನ ನಿರ್ವಹಣೆ ಕಷ್ಟವಾಗಿದ್ದರೆ ವಿಚ್ಛೇದನವನ್ನು ಮನುಕುಲಕ್ಕೆ ಪರಿಹಾರವಾಗಿ ಸೂಚಿಸಲಾಗಿದೆ ಎಂದು ಕುರಾನ್ (ಕಿಡಿಚಿಟಿ) ಹೇಳಿದೆ ಎಂದು ಮಂಡಳಿ ತಿಳಿಸಿದೆ.
ವಿಚ್ಚೇದನದಿಂದ ಯಶಸ್ವಿಯಾಗಿ ಹೊರಬಂದ ಮಹಿಳೆಯರಿಗೆ ಈ ತೀರ್ಪು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಸಂವಿಧಾನದ 25ನೇ ವಿಧಿ ಪ್ರಕಾರ ಎಲ್ಲಾ ಧರ್ಮಗಳು ತಮ ಧರ್ಮವನ್ನು ಆಚರಿಸುವ ಹಕ್ಕು ಹೊಂದಿವೆ. ಇದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕು.
ಬಹು-ಧಾರ್ಮಿಕ ಮತ್ತು ಬಹು-ಸಾಂಸ್ಕೃತಿಕ ದೇಶದಲ್ಲಿ ಏಕರೂಪದ ನಾಗರೀಕ ಸಂಹಿತೆ ಅಪ್ರಸ್ತುತ. ಇದನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನಗಳು ರಾಷ್ಟ್ರದ ಸ್ಫೂರ್ತಿ ಮತ್ತು ಅಲ್ಪಸಂಖ್ಯಾತರಿಗೆ ಖಾತರಿಪಡಿಸಿದ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?:
ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿ ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ನ್ಯಾ.ಬಿ.ವಿ.ನಾಗರತ್ನ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಹೇಳಿತ್ತು. ವಿಚ್ಛೇದಿತ ಮಹಿಳೆಯೂ ತನ್ನ ಪರಿತ್ಯಕ್ತ ಪತಿಯಿಂದ ಸೆಕ್ಷನ್ 125ರಡಿ ಜೀವನಾಂಶವನ್ನು ಕೋರಬಹುದು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986ರ ನಿಯಮವು ಈ ಸೆಕ್ಷನ್‌ಗೆ ಅನ್ವಯವಾಗುವುದಿಲ್ಲ ಎಂದು ಹೇಳಿತ್ತು.